ಸ್ಯಾಂಡಲ್ವುಡ್ನ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಕೃಷ್ಣಂ ಪ್ರಣಯ ಸಖಿ'. ಶಿವಂ ಹಾಗೂ ದಂಡುಪಾಳ್ಯ ಸಿನಿಮಾಗಳ ಮೂಲಕ ತನ್ನದೇ ಬೇಡಿಕೆ ಹೊಂದಿರುವ ಶ್ರೀನಿವಾಸರಾಜು ಅವರು ಗಣಿ ಅಭಿನಯದ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಬಾರಿ ರೊಮ್ಯಾಂಟಿಕ್ ಜೊತೆಗೆ ಫ್ಯಾಮಿಲಿ ಕಥೆಯನ್ನು ಹೇಳಲು ಸಜ್ಜಾಗಿದ್ದಾರೆ. ಚಿತ್ರದ ಪೋಸ್ಟರ್ ಹಾಗೂ ಹಾಡುಗಳಿಂದ ಟಾಕ್ ಆಗುತ್ತಿರುವ ಈ ಬಹುನಿರೀಕ್ಷಿತ ಚಿತ್ರದ ಮೂರನೇ ಹಾಡು ಅನಾವರಣಗೊಂಡಿದೆ.
'ದ್ವಾಪರ' ಸಾಂಗ್ ರಿಲೀಸ್: ಈಗಾಗಲೇ 'ಮೈ ಮ್ಯಾರೇಜ್ ಇಸ್ ಫಿಕ್ಸ್ಡ್' ಹಾಗೂ 'ಚಿನ್ನಮ್ಮ' ಹಾಡುಗಳು ಬಿಡುಗಡೆಯಾಗಿ ಮಿಲಿಯನ್ಗಟ್ಟಲೆ ವೀಕ್ಷಣೆ ಕಂಡು ಜನರ ಮನ ಗೆದ್ದಿವೆ. ಇತ್ತೀಚೆಗೆ 'ದ್ವಾಪರ' ಎಂಬ ಸಾಂಗ್ ರಿಲೀಸ್ ಆಗಿ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ಸು ಕಂಡಿದೆ. ಹಾಡಿನಲ್ಲಿ ಗಣಿ, ಮಲಯಾಳಂ ಮನಮೋಹಿನಿ ಮಾಳವಿಕ ನಾಯರ್ ಜೊತೆ ಸಖತ್ ಸ್ಟೆಪ್ ಹಾಕಿದ್ದಾರೆ.
2 ಮಿಲಿಯನ್ಗೂ ಹೆಚ್ಚು ವೀಕ್ಷಣೆ, ಗಣಿ ಧನ್ಯವಾದ:ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಖತ್ ಟ್ಯೂನ್ ಹಾಕಿದ್ದು, ಸರಿಗಮಪ ಖ್ಯಾತಿಯ ಜಸ್ಕರಣ್ ಸಿಂಗ್ ಈ ಹಾಡನ್ನು ಇಂಪಾಗಿ ಹಾಡಿದ್ದಾರೆ. ಆನಂದ್ ಆಡಿಯೋದಲ್ಲಿ ಬಿಡುಗಡೆ ಆಗಿರುವ ಸುಮಧುರ ಹಾಡನ್ನು ಎರಡು ಮಿಲಿಯನ್ಗೂ ಹೆಚ್ಚು ಜನರು ವೀಕ್ಷಿಸಿ ಮೆಚ್ಚಿದ್ದಾರೆ. ಈ ಹಿನ್ನೆಲೆ ಗಣೇಶ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಹಾಡಿನ ಪ್ರೋಮೋ ಶೇರ್ ಮಾಡಿ 'ಈ ಹಾಡನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಗಣಿ ನಟನೆಯ 41ನೇ ಚಿತ್ರ:'ಕೃಷ್ಣಂ ಪ್ರಣಯ ಸಖಿ', ನಟ ಗಣೇಶ್ ಅಭಿನಯದ 41ನೇ ಚಿತ್ರ. ಗಣೇಶ್ ಜೊತೆ ಮಾಳವಿಕ ನಾಯರ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರ ಪ್ರವೇಶಿಸಲಿದೆ.