ದುಲ್ಕರ್ ಸಲ್ಮಾನ್, ದಕ್ಷಿಣ ಚಿತ್ರರಂಗದ ಬಹುಬೇಡಿಕೆ ತಾರೆಯಲ್ಲೋರ್ವರು. ತಮ್ಮ ಅಮೋಘ ಅಭಿನಯದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅತ್ಯುತ್ತಮ ನಟನೆಗೆ ಪ್ರೇಕ್ಷಕರ ಮೆಚ್ಚುಗೆ ಸಂಪಾದಿಸಿದ್ದಾರೆ. ಮುಂದಿನ ಚಿತ್ರಗಳ ಬಗ್ಗೆ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ನಟನ ವಿಡಿಯೋವೊಂದು ಜಾಗ ಗಿಟ್ಟಿಸಿಕೊಂಡಿದೆ.
ವೆಂಕಿ ಅಟ್ಲೂರಿ ನಿರ್ದೇಶನದ 'ಲಕ್ಕಿ ಭಾಸ್ಕರ್' ನಟನ ಮುಂಬರುವ ಬಹುನಿರೀಕ್ಷಿತ ಚಿತ್ರ. ಇತ್ತೀಚೆಗೆ, ಹೈದರಾಬಾದ್‌ನ ಪ್ರಸಿದ್ಧ ಕೋಟಿ ಮಹಿಳಾ ಕಾಲೇಜಿನ ಚಿತ್ರೀಕರಣದ ಸ್ಥಳದಲ್ಲಿ ನಟ ಕಾಣಿಸಿಕೊಂಡರು. ಇದರ ಫೋಟೋ-ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವೆಂಕಿ ಅಟ್ಲೂರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಬಹುನಿರಿಕ್ಷಿತ ಸಿನಿಮಾದಲ್ಲಿ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ನಟ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ತಮ್ಮ ಹೊಸ ಅವತಾರ ಪ್ರದರ್ಶಿಸೋ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು.
ಇದೀಗ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ದುಲ್ಕರ್ ಸಲ್ಮಾನ್ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನ ಕೋಟಿ ವುಮನ್ಸ್ ಕಾಲೇಜಿಗೆ ಆಗಮಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ನಟ ತಮ್ಮ ವಾಹನದಿಂದ ಹೊರಬರುತ್ತಿದ್ದಂತೆ, ಅವರಿಗಾಗಿ ಕಾದು ಕುಳಿತಿದ್ದ ಜನಸಾಗರ ಅವರನ್ನು ಸುತ್ತುವರೆಯಿತು. ಶರ್ಟ್, ಟೈ, ಪ್ಯಾಂಟ್ ಮತ್ತು ಏವಿಯೇಟರ್ ಸನ್ ಗ್ಲಾಸ್ ಧರಿಸಿ ನಟ ಆಕರ್ಷಕ ನೋಟದಲ್ಲಿ ಕಾಣಿಸಿಕೊಂಡರು. ಮೆಟ್ಟಿಲುಗಳನ್ನು ಹತ್ತುವಾಗ ಅಭಿಮಾನಿಗಳತ್ತ ಕೈ ಬೀಸಿದರು.