ಹೈದರಾಬಾದ್: 'ದೃಶ್ಯಂ'. ವಿಭಿನ್ನ ಚಿತ್ರಕಥೆಯೊಂದಿಗೆ ಭಾರತೀಯ ಚಿತ್ರರಂಗದ ಗಮನ ಸೆಳೆದ ಸಿನಿಮಾ. ಮಲಯಾಳಂನಲ್ಲಿ ಮೊದಲ ಬಾರಿಗೆ ತೆರೆಕಂಡಿದ್ದ ಈ ಚಿತ್ರ ನಂತರ ಕನ್ನಡ, ತೆಲುಗು, ತಮಿಳು ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಇದೇ ಸಿನಿಮಾ ಹಾಲಿವುಡ್ ಜಗತ್ತು ಪ್ರವೇಶಿಸುತ್ತಿದೆ. ಇದರೊಂದಿಗೆ ಹಾಲಿವುಡ್ನಲ್ಲಿ ಮರುನಿರ್ಮಾಣವಾಗುತ್ತಿರುವ ಭಾರತದ ಮೊದಲ ಚಲನಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಜೀತು ಜೋಸೆಫ್ ನಿರ್ದೇಶನದ ಮೋಹನ್ ಲಾಲ್ ಮತ್ತು ಮೀನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ 'ದೃಶ್ಯಂ' 2013ರಲ್ಲಿ ಮಲಯಾಳಂನಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ನಂತರ ಕನ್ನಡದಲ್ಲಿ 'ದೃಶ್ಯ' ಹೆಸರಲ್ಲಿ ರವಿಚಂದ್ರನ್, ನವ್ಯಾ ನಾಯರ್ ಸೇರಿ ಪ್ರಮುಖರ ತಾರಾಗಣದಲ್ಲಿ ತೆರೆಗೆ ಬಂದಿತ್ತು. ಅಲ್ಲಿಂದ ತೆಲುಗಿನಲ್ಲಿ ವೆಂಕಟೇಶ್ 'ದೃಶ್ಯಂ' ರಿಮೇಕ್ ಆಗಿತ್ತು. ವಿಕ್ಟರಿ ವೆಂಕಟೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 2015ರಲ್ಲಿ ತಮಿಳಿನಲ್ಲಿ ಕಮಲ್ ಹಾಸನ್, ಗೌತಮಿ 'ಪಾಪನಾಸಂ' ಮತ್ತು ಹಿಂದಿಯಲ್ಲಿ ಅಜಯ್ ದೇವಗನ್, ಶ್ರೇಯಾ ಸರಣ್ ಅಭಿನಯದಲ್ಲಿ 'ದೃಶ್ಯಂ' ಎಂದೇ ರಿಮೇಕ್ ಮಾಡಲಾಗಿತ್ತು. ಎಲ್ಲೆಡೆಯೂ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
ಇಂಗ್ಲಿಷ್, ಸ್ಪ್ಯಾನಿಷ್ ಭಾಷೆಗೆ ರೀಮೇಡ್: ಇದೀಗ ಹಾಲಿವುಡ್ ನಿರ್ಮಾಣ ಸಂಸ್ಥೆಯು ಈ ಚಿತ್ರವನ್ನು ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗೆ ರೀಮೇಡ್ ಮಾಡುವುದಾಗಿ ಘೋಷಿಸಿದೆ. ಇದರೊಂದಿಗೆ 'ದೃಶ್ಯಂ' ಹಾಲಿವುಡ್‌ಗೆ ರಿಮೇಕ್ ಆಗಲಿರುವ ಮೊದಲ ಭಾರತೀಯ ಚಿತ್ರವಾಗಲಿದೆ. ಪ್ರಸಿದ್ಧ ಗಲ್ಫ್‌ಸ್ಟ್ರೀಮ್ ಪಿಕ್ಚರ್ಸ್ ಮತ್ತೊಂದು ನಿರ್ಮಾಣ ಕಂಪನಿಯೊಂದಿಗೆ ಈ ಸಿನಿಮಾವನ್ನು ರಿಮೇಕ್ ಮಾಡಲಿದೆ. ಭಾರತೀಯ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಪನೋರಮಾ ಸ್ಟುಡಿಯೋಸ್‌ನಿಂದ ರಿಮೇಕ್ ಹಕ್ಕುಗಳನ್ನು ಈ ಕಂಪನಿ ಪಡೆದುಕೊಂಡಿದೆ. ಹಾಲಿವುಡ್‌ನ 'ದೃಶ್ಯಂ' ರಿಮೇಕ್‌ನಲ್ಲಿ ಯಾವ ನಟರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಶೀಘ್ರದಲ್ಲೇ 'ದೃಶಂ 3':ಮತ್ತೊಂದೆಡೆ, 'ದೃಶ್ಯಂ' ಮೊದಲ ಭಾಗ ಅಭೂತಪೂರ್ವ ಯಶಸ್ಸು ಕಂಡ ಬಳಿಕ, ಸಿನಿಮಾ ಸರಣಿ ರೂಪದಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಮಲಯಾಳಂ ಸೇರಿ ಎಲ್ಲ ಭಾಷೆಗಳಲ್ಲೂ ಭಾಗ 2 ಬಿಡುಗಡೆಯಾಗಿದೆ. ಭಾರತೀಯ ಭಾಷೆಗಳು ಮಾತ್ರವಲ್ಲದೇ, 'ದೃಶ್ಯಂ', 'ದೃಶ್ಯಂ-2' ಚಿತ್ರವು ಕೊರಿಯನ್ ಭಾಷೆಗೂ ರಿಮೇಕ್ ಆಗಿತ್ತು. ಅಲ್ಲಿಯೂ ಕೂಡ ಇದು ದೊಡ್ಡ ಯಶಸ್ಸು ಗಳಿಸಿತ್ತು. ಈಗ ಮಲಯಾಳಂನಲ್ಲಿ ಮೂರನೇ ಭಾಗ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಶೀಘ್ರದಲ್ಲೇ 'ದೃಶಂ 3' ತೆರೆ ಮೇಲೆ ಬರಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಸೆಪ್ಟೆಂಬರ್ಗೆ ಮೊದಲ ಮಗು ಬರಮಾಡಿಕೊಳ್ಳಲಿದ್ದಾರೆ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್