ಭಾರತೀಯ ಚಿತ್ರರಂಗದ ಖ್ಯಾತನಾಮರ ಮಕ್ಕಳ ಪೈಕಿ ಹಲವರು ಇದೇ ಬಣ್ಣದ ಲೋಕದಲ್ಲಿ ನೆಲೆಯೂರಿದ್ದಾರೆ. ಅವರಲ್ಲಿ ಕೆಲವರು ತಮ್ಮದೇ ಆದ ಸ್ಟಾರ್ ಡಮ್ ಹೊಂದಿದ್ದಾರೆ. ನೆಪೋಟಿಸಂನಂತಹ ನಿರಂತರ ಚರ್ಚೆ ನಡುವೆಯೂ ಪ್ರೇಕ್ಷಕರನ್ನು ತಲುಪುವಲ್ಲಿ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಕೆಲವರು ಯಶ ಕಂಡಿದ್ದಾರೆ.
ಸ್ಟಾರ್ ಕಿಡ್‌ಗೆ ಸ್ಟಾರ್‌ನಂತೆಯೇ ಇಮೇಜ್ ಇರುತ್ತದೆ. ತಂದೆಯ ಇಮೇಜ್ ಜೊತೆಗೆ ಆಸ್ತಿಗಳೂ ಕೂಡ ಬಂದು ಸೇರುತ್ತವೆ. ಇಂಗ್ಲಿಷ್ ವೆಬ್‌ಸೈಟ್ ಮನಿ ಕಂಟ್ರೋಲ್‌ನ ಡೇಟಾ ಪ್ರಕಾರ, ಸಲ್ಮಾನ್ ಖಾನ್ 2,900 ಕೋಟಿ ರೂಪಾಯಿಗಳೊಂದಿಗೆ ಅತ್ಯಂತ ಶ್ರೀಮಂತ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ ನಂ.1 ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಗ್ಲೋಬಲ್ ಸ್ಟಾರ್ ರಾಮ್ ಚರಣ್, ಬಾಲಿವುಡ್ ಬಹುಬೇಡಿಕೆ ತಾರೆಯರಾದ ರಣ್ಬೀರ್ ಕಪೂರ್, ಆಲಿಯಾ ಭಟ್, ಅಭಿಷೇಕ್ ಬಚ್ಚನ್ ಅವರಂತಹ ಸ್ಟಾರ್ ಕಿಡ್ಸ್ ಕೂಡ ಟಾಪ್-1ನಲ್ಲಿ ಇಲ್ಲ.
ಹಾಗಾದರೆ ಟಾಪ್-1ನಲ್ಲಿ ಯಾರಿದ್ದಾರೆ? ಬಾಲಿವುಡ್ನ ನಟ - ನಿರ್ದೇಶಕ-ನಿರ್ಮಾಪಕ ರಾಕೇಶ್ ರೋಷನ್ ಪುತ್ರ ಹೃತಿಕ್ ರೋಷನ್ ಭಾರತದ ಅತ್ಯಂತ ಶ್ರೀಮಂತ ಸ್ಟಾರ್ ಕಿಡ್ಸ್ ಪೈಕಿ ನಂಬರ್ ಒನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವರದಿಗಳ ಪ್ರಕಾರ, ರಾಕೇಶ್ ರೋಷನ್ ಅವರ ಆಸ್ತಿ ಸರಿಸುಮಾರು 3,100 ಕೋಟಿ ರೂ. 2000ರಲ್ಲಿ 'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟ ಹೃತಿಕ್ ರೋಷನ್ ಕೂಡ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿದ್ದಾರೆ. ಸೂಪರ್ ಸ್ಟಾರ್ ಆಗಲು ಕೊಂಚ ಸಮಯ ಹಿಡಿಯಿತಾದರೂ ಸೋಲಲಿಲ್ಲ. ನಂತರದ ದಿನಗಳಲ್ಲಿ ಬಂದ 'ಕ್ರಿಶ್', 'ಧೂಮ್ 2', 'ಜೋಧಾ ಅಕ್ಬರ್', 'ಅಗ್ನಿಪಥ್', 'ಕಾಬಿಲ್'ನಂತಹ ಚಿತ್ರಗಳ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು.
ಹೃತಿಕ್ ರೋಷನ್ ಸಿನಿಮಾ ಮಾತ್ರವಲ್ಲದೇ ಇತರ ಮಾಧ್ಯಮಗಳ ಮೂಲಕವೂ ದೊಡ್ಡ ಮಟ್ಟದ ಸಂಭಾವನೆ ಗಳಿಸುತ್ತಾರೆ. ಫಿಟ್ನೆಸ್ ಐಕಾನ್, ಸ್ಟೈಲಿಶ್ ಐಕಾನ್ ಆಗಿ ಗುರುತಿಸಿಕೊಂಡಿರುವ ಹೃತಿಕ್ ನಟನಾಗಿ ಮಾತ್ರವಲ್ಲದೇ ಹಲವು ಬ್ರ್ಯಾಂಡ್ಗಳ ರಾಯಭಾರಿಯಾಗಿ, ಸೋಷಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ, ನಿರ್ಮಾಪಕರಾಗಿ, ದೂರದರ್ಶನ ಕಾರ್ಯಕ್ರಮಗಳು, ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆದಾರರಾಗಿ, ಹೆಚ್ಆರ್ಎಕ್ಸ್ ಬ್ರ್ಯಾಂಡ್‌ನ ವಿನ್ಯಾಸಕರಾಗಿ ಸಾಕಷ್ಟು ಸಂಭಾವನೆ ಗಳಿಸುತ್ತಿದ್ದಾರೆ.