ಚೆನ್ನೈ (ತಮಿಳುನಾಡು): ನಟ - ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್, 'ತಮಿಳುನಾಡು ಸರ್ಕಾರ ಡ್ರಗ್ಸ್ ನಿಯಂತ್ರಣದಲ್ಲಿ ವಿಫಲವಾಗಿದೆ' ಎಂದು ಆರೋಪಿಸಿದ್ದಾರೆ. ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಟ, ಉತ್ತಮ ಶಿಕ್ಷಣ ಹೊಂದಿರುವ ನಾಯಕರು ರಾಜಕೀಯಕ್ಕೆ ಬರಬೇಕು ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು. ಉತ್ತಮ ನಾಯಕರು ಮತ್ತು ನಾಯಕತ್ವದ ಗುಣಗಳ ಬಗ್ಗೆ ಒತ್ತಿ ಹೇಳಿದರು.
ಸಮಾಜ ಸೇವೆಗಳಿಗೂ ಹೆಸರುವಾಸಿಯಾಗಿರುವ ವಿಜಯ್ ಈ ಹಿಂದೆ ತಮಿಳುನಾಡಿನ 10 ಮತ್ತು 12ನೇ ತರಗತಿಯ ಟಾಪರ್ಸ್ ಅನ್ನು ಗೌರವಿಸುವುದಾಗಿ ತಿಳಿಸಿದ್ದರು. ಅದರಂತೆ ಇಂದು ಚೆನ್ನೈನಲ್ಲಿ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದಾರೆ. ಚೆನ್ನೈನ ತಿರುವನ್ಮಿಯೂರಿನಲ್ಲಿಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಮತ್ತೊಂದು ಕಾರ್ಯಕ್ರಮವನ್ನು ಜುಲೈ 3ಕ್ಕೆ ನಿಗದಿಪಡಿಸಲಾಗಿದೆ.
ವಿದ್ಯಾರ್ಥಿಗಳನ್ನು ಸನ್ಮಾನಿಸಿದ ನಂತರ ಸಮಾರಂಭದಲ್ಲಿ ಮಾತನಾಡಿದ ವಿಜಯ್, "ನಮಗೆ ಉತ್ತಮ ನಾಯಕರು ಬೇಕು. ನಾನಿಲ್ಲಿ ರಾಜಕೀಯವಾಗಿ ಹೇಳುತ್ತಿಲ್ಲ. ನೀವು ಏನು ಮಾಡುತ್ತಿದ್ದೀರೋ, ಅದರಲ್ಲೇ ನಿಮಗೆ ನಾಯಕತ್ವದ ಗುಣ ಇರಬೇಕು, ಅದನ್ನೇ ನಾನಿಲ್ಲಿ ಹೇಳುತ್ತಿದ್ದೇನೆ" ಎಂದು ತಿಳಿಸಿದರು. ಜೊತೆಗೆ, ಭವಿಷ್ಯದಲ್ಲಿ ರಾಜಕೀಯವೂ ಕೂಡ ಕೆರಿಯರ್ ಆಗಿ ಆಯ್ಕೆಯಾಗಬೇಕು. ಅದು ನನ್ನ ಆಶಯ. ಉತ್ತಮ ಶಿಕ್ಷಣ ಹೊಂದಿರುವ ನಾಯಕರು ರಾಜಕೀಯಕ್ಕೆ ಬರಬೇಕು ಎಂದು ನೀವು ಯೋಚಿಸುತ್ತೀರಾ? ಎಂದು ನಟ ಪ್ರಶ್ನಿಸಿದರು.
ತಮ್ಮ ದಾರಿಯಲ್ಲಿ ಬರುವ ಪ್ರತಿಯೊಂದು ಮಾಹಿತಿಯನ್ನು ಕ್ರಾಸ್-ಚೆಕ್ ಮಾಡಲು ಕೇಳಿಕೊಂಡ ನಟ, "ಸೋಷಿಯಲ್ ಮೀಡಿಯಾ ಚಾನಲ್ಗಳು ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ನಮಗೆ ಅನೇಕ ವಿಷಯಗಳನ್ನು ನೀಡುತ್ತವೆ. ಎಲ್ಲವನ್ನೂ ನೋಡಿ. ಆದರೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿಶ್ಲೇಷಿಸಿ" ಎಂದು ಕೇಳಿಕೊಂಡರು.