ಬಾಹುಬಲಿ ಸ್ಟಾರ್ ರಾಣಾ ದಗ್ಗುಬಾಟಿ ಅವರು ತಮ್ಮ ಹೊಸ ಟಾಕ್ ಶೋ 'ದಿ ರಾಣಾ ದಗ್ಗುಬಾಟಿ ಶೋ'ನಲ್ಲಿ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳನ್ನು ಒಟ್ಟುಗೂಡಿಸುತ್ತಿದ್ದು, ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ವಿಶೇಷವೆಂದರೆ ತಮಾಷೆ ಮತ್ತು ಆಸಕ್ತಿದಾಯಕ ಸಂಭಾಷಣೆ. ಪ್ರಾಮಾಣಿಕ ಪ್ರಯತ್ನ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರತೀ ವಾರ ಹೊಸ ಸಂಚಿಕೆಯನ್ನು ವೀಕ್ಷಿಸಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಈ ವಾರದ ಸಂಚಿಕೆಯಲ್ಲಿ, ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ, ನಟಿ ನೇಹಾ ಶೆಟ್ಟಿ ಅವರೊಂದಿಗೆ ರಾಣಾ ದಗ್ಗುಬಾಟಿ ಮಾತುಕತೆ ನಡೆಸಿದ್ದಾರೆ. ರಿಷಬ್ ತಮ್ಮ ಊರು ಕೆರಾಡಿಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಶೆಟ್ರು ತಮ್ಮ ಸಿನಿಮಾ ನಿರ್ಮಾಣದ ಪ್ರಯಾಣ ಮತ್ತು ಅವರ ಹಳ್ಳಿಯನ್ನು ಸಿನಿಮೀಯ ಕೇಂದ್ರವನ್ನಾಗಿ ಮಾಡುವ ಕನಸಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಕಾಂತಾರ ಆರಂಭದ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ, ಈ ಚಿತ್ರವು ತಮ್ಮ ಮನೆ ಮತ್ತು ಸಮುದಾಯಕ್ಕೆ ಎಷ್ಟು ಸಂಪರ್ಕ ಹೊಂದಿದೆ ಎಂಬುದನ್ನು ಹೇಳಿದರು. "ಬಾಲ್ಯದಿಂದಲೂ ನನ್ನ ಹಳ್ಳಿ ಕೆರಾಡಿಯಲ್ಲಿ ಚಲನಚಿತ್ರವನ್ನು ಚಿತ್ರೀಕರಿಸುವುದು ನನ್ನ ಕನಸಾಗಿತ್ತು. ನಾನು ಹಲವು ಸಿನಿಮಾಗಳಿಗಾಗಿ ಈ ಸ್ಥಳವನ್ನು ನೋಡಿದ್ದೆ. ಆದರೆ ಕೆಲಸ ಮಾಡಿರಲಿಲ್ಲ. ನಂತರ ಕಾಂತಾರ ಬಂದಿತು. ಅಂತಿಮವಾಗಿ ಇಲ್ಲೇ ಚಿತ್ರೀಕರಿಸಲಾಯಿತು. ಇದೊಂದು ಸಾಮೂಹಿಕ ಪ್ರಯತ್ನವಾಗಿತ್ತು. ಚಿತ್ರದಲ್ಲಿ ಗ್ರಾಮದ 700ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಅದ್ಭುತ ಕೊಡುಗೆಯಿಂದಾಗಿ ನಾನು ನನ್ನ ಮನೆಗೆ ಕೆಎಫ್‌ಸಿ - ಕೆರಾಡಿ ಫಿಲ್ಮ್ ಸಿಟಿ ಎಂದು ಕರೆಯಲು ಪ್ರಾರಂಭಿಸಿದೆ ಎಂದು ಹಂಚಿಕೊಂಡರು.
ಕಾಂತಾರ ಚಿತ್ರವು ಸಿನಿಮಾ ಬಗೆಗಿನ ತಮ್ಮ ಹಳ್ಳಿಜನರ ಮನೋಭಾವವನ್ನು ಹೇಗೆ ಬದಲಿಸಿತು ಎಂಬುದನ್ನು ಸಹ ರಿಷಬ್ ಹೇಳಿದ್ದಾರೆ. ಸಿನಿಮಾಗಳಿಗೆ ಈ ಪ್ರದೇಶ ಅಷ್ಟು ದೊಡ್ಡದಲ್ಲ. ಆದರೆ ಕಾಂತಾರ ತಮಗೆ ತಮ್ಮ ಕಥೆಯನ್ನು ತೆರೆ ಮೇಲೆ ನೋಡುವ ಅವಕಾಶ ಮಾಡಿಕೊಡ್ತು. ಅದು ನಮ್ಮದೇ ಕಥೆ, ಪರಂಪರೆ, ಮೂಲಕ್ಕೆ ಸಂಬಂಧಿಸಿತ್ತು. ಹಾಗಾಗಿ ಬಹಳಷ್ಟು ಪ್ರೀತಿ, ಆಶೀರ್ವಾದ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು.