'ಆಕಾಶ್', 'ಅರಸು', 'ಮೆರವಣಿಗೆ'ಯಂತಹ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು ಹೊಸ ಸಿನಿಮಾ ಕೈಗೆತ್ತಿಕೊಂಡಿರುವುದು ನಿಮಗೆ ತಿಳಿದಿರುವ ಸಂಗತಿ. ಪ್ರತೀ ಸಿನಿಮಾದಲ್ಲಿಯೂ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಅವರೀಗ, ಈ ಚಿತ್ರದ ಮೂಲಕ ಕಿರುತೆರೆಯ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಸ್ಮೈಲ್ ಗುರು ರಕ್ಷಿತ್ ಅವರನ್ನು ನಾಯಕನಾಗಿ ಕನ್ನಡ ಬೆಳ್ಳಿಪರದೆಗೆ ಕರೆದುಕೊಂಡು ಬರುತ್ತಿದ್ದಾರೆ. ಮಹೇಶ್ ಬಾಬು ಹಾಗೂ ರಕ್ಷಿತ್ ಜೋಡಿಯ ಹೊಸ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಬೆಂಗಳೂರಿನ ಅಭಯ ಹಸ್ತ ಬಲಮುರಿ ದೇಗುಲದಲ್ಲಿ ಮುಹೂರ್ತ ಸಮಾರಂಭ ನೆರವೇರಿದೆ.
ಮಹೇಶ್ ಬಾಬು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಶೀರ್ಷಿಕೆ ಏನೆಂಬುದು ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಇದನ್ನು 'ಪ್ರೊಡಕ್ಷನ್ ನಂ. 2' ಎಂದು ಕರೆಯಲಾಗುತ್ತಿದೆ. ನೆನಪಿರಲಿ ಪ್ರೇಮ್ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಸಿನಿಮಾದ ಮೊದಲ ದೃಶ್ಯಕ್ಕೆ ಅವರು ಆರಂಭ ಫಲಕ ತೋರಿ, ಬಳಿಕ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಎ ಕ್ಲಾಸ್ ಸಿನಿ ಫಿಲ್ಮ್ಸ್ ಪ್ರೊಡಕ್ಷನ್ ಸಂಸ್ಥಾಪಕ ಅನುರಾಗ್ ಆರ್ ತಾಯಿ ಕ್ಯಾಮರಾ ಚಾಲನೆ ಮಾಡುವ ಮೂಲಕ ಶುಭ ಕೋರಿದರು. ಈ ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್ ಅವರಿಗೆ ಜೋಡಿಯಾಗಿ 'ವೀರ ಮದಕರಿ'ಯಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ಕಾಣಿಸಿಕೊಳ್ಳಲಿದ್ದಾರೆ. ಮತ್ತೋರ್ವ ನಾಯಕಿಯನ್ನು ಚಿತ್ರತಂಡ ಶೀಘ್ರದಲ್ಲೇ ರಿವೀಲ್ ಮಾಡಲಿದೆ.