ಮುಂಬೈ:ಮನೆಯವರ ವಿರೋಧದ ಹೊರತಾಗಿಯೂ ನಟನಾಗಬೇಕು ಎಂಬ ಕನಸು ಹೊತ್ತು ಕಿರುತೆರೆಯಲ್ಲಿ ಮಿಂಚುತ್ತಿದ್ದ ನಟನ ಬಾಳಿನಲ್ಲಿ ವಿಧಿ ಕ್ರೂರ ಆಟವಾಡಿದ್ದು, 23 ವರ್ಷದ ಅಮನ್ ಜೈಸ್ವಾಲ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಧರ್ತೀಪುತ್ರ ನಂದಿನಿ ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ಹಿಂದಿ ಕಿರುತೆರೆ ನಟ ಅಮನ್ ಜೈಸ್ವಾಲ್ ಶುಕ್ರವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮುಂಬೈನ ಹಿಲ್ ಪಾರ್ಕ್ ರಸ್ತೆಯಲ್ಲಿ ಮಧ್ಯಾಹ್ನ 3.15ರ ಸುಮಾರಿಗೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಬೈಕ್ ಮೂಲಕ ಸಾಗುತ್ತಿದ್ದ ಜೈಸ್ವಾಲ್ ಅವರಿಗೆ ಟ್ರಕ್ ಗುದ್ದಿದೆ. ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.
ತಕ್ಷಣಕ್ಕೆ ನಟನನ್ನು ಕ್ಯಾಮಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಂಭೀರ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಿಸಿಲ್ಲ. ಅಪಘಾತಕ್ಕೆ ಕಾರಣವಾದ ಟ್ರಕ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಅಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಅಂಬೋಲಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಮಾತನಾಡಿರುವ ಧರ್ತೀಪುತ್ರ ನಂದಿನಿ ಧಾರಾವಾಹಿಯ ಧೀರಜ್ ಮಿಶ್ರಾ ಮಾತನಾಡಿ, ಆಡಿಷನ್ವೊಂದಕ್ಕೆ ಜೋಗೇಶ್ವರಿ ಹೆದ್ದಾರಿಯಲ್ಲಿ ಅಮನ್ ಹೋಗುವಾಗ ಈ ಅಪಘಾತ ಸಂಭವಿಸಿದೆ ಎಂದಿದ್ದಾರೆ.
ಮನೆಯವರ ಇಚ್ಛೆ ವಿರುದ್ಧವಾಗಿ ನಟನೆ:ಇನ್ನು ನಟ ಆಗಸ್ಟ್ 2023ರಲ್ಲಿ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ನೀಡಿದ ಸುಳಿವಿನಂತೆ ಮನೆಯವರ ಇಚ್ಛೆ ವಿರೋಧವಾಗಿ ಅವರು ನಟನೆಗೆ ಬಂದಿದ್ದರು. ಅವರ ಪೋಸ್ಟ್ನ ಸಾರಾಂಶ ಹೀಗಿದೆ. ನಾಲ್ಕು ವರ್ಷದ ಹಿಂದೆ, ನಟನಾಗಬೇಕು ಎಂಬ ಕನಸು ಹೊತ್ತ ಒಬ್ಬ ಚಿರ ಯುವಕ ಯಾವುದೇ ನಿರ್ದೇಶನವಿಲ್ಲದೇ ಕುಟುಂಬದ ವಿರೋಧದ ನಡುವೆ ದಿಟ್ಟ ಹೆಜ್ಜೆ ಇಟ್ಟು, ಕನಸು ನನಸಾಗಿಸಲು ಈ ನಗರಕ್ಕೆ ಆಗಮಿಸಿದ್ದೆ. ಇದರ ಜೊತೆಗೆ ತಾವು ಅನುಭವಿಸಿದ ಸೋಲು ಮತ್ತು ಕಠಿಣ ಹಾದಿಗಳ ನಡುವೆ ಅವಿರಹಿತ ಕಠಿಣ ಶ್ರಮ ಮತ್ತು ಸಮರ್ಪಣೆಗಳು ತಮ್ಮ ಗುರಿಯನ್ನು ಸಾಧಿಸಿದವು. ಇಂದು ಅದರ ಪ್ರತಿಫಲ ಸಿಕ್ಕು ಹೀರೋ ಆಗಬೇಕು ಎಂಬ ಕನಸು ನನಸಾಯಿತು. ಈ ಪ್ರಯಾಣ ಮುಂದುವರೆಯಲಿದೆ ಎಂದು ಬರೆದುಕೊಂಡಿದ್ದರು.
ಇದೀಗ ಅವರ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅವರ ಸಾವಿಗೆ ಸಂತಾಪ ಸೂಚಿಸಿ. ಕಂಬನಿ ಮಿಡಿಯುತ್ತಿದ್ದಾರೆ. ಜೈಸ್ವಾಲ್ ಮೂಲತಃ ಉತ್ತರ ಪ್ರದೇಶದವರು. ನಟನೆಗೂ ಮುನ್ನ ಮಾಡೆಲ್ ಆಗಿದ್ದ ಇವರು ಬಳಿಕ ಮನರಂಜನಾ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದರು. ಉಡಾರಿಯಾನ್ ಮೂಲಕ ಹೆಸರು ಮಾಡಿದ್ದರು. ಪುಣ್ಯಶ್ಲೋಕ ಅಹಲ್ಯಾಬಾಯಿಯಲ್ಲಿ ಯಶವಂತ್ ರಾವ್ ಫಾನ್ಸೆ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಸೈಫ್ ಅಲಿ ಖಾನ್ ಮೇಲಿನ ದಾಳಿ ಆಘಾತ ತಂದಿದೆ: ನಟಿ ಶಿಲ್ಪಾ ಶೆಟ್ಟಿ
ಇದನ್ನೂ ಓದಿ:'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು