ಸಂಗೀತ ಮಾಂತ್ರಿಕ ಇಳಯರಾಜ ಅವರ ಜೀವನಚರಿತ್ರೆಯಲ್ಲಿ ಸೌತ್ ಸೂಪರ್ ಸ್ಟಾರ್ ಧನುಷ್ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗಾಗಲೇ ತಿಳಿದಿರುವ ವಿಚಾರ. ಕಳೆದ ವರ್ಷದ ಕೊನೆಯಲ್ಲಿ ಘೋಷಣೆಯಾದ ಈ ಚಿತ್ರ 2024ರ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಯ್ತು. ಆದರೆ ಇಳಯರಾಜ ಬಯೋಪಿಕ್ ಸುತ್ತಲಿರುವ ಸುದ್ದಿಗಳು ಬೇರೆಯದ್ದೇ ಸೂಚಿಸಿದೆ.
ಭಾರತೀಯ ಚಿತ್ರರಂಗದ ಹೆಸರಾಂತ ಸಂಗೀತಗಾರ ಇಳಯರಾಜ ಅವರ ಜೀವನಾಧಾರಿತ ಚಿತ್ರದ ಚಿತ್ರೀಕರಣ ನಾಳೆ ಅಂದರೆ ಮಾರ್ಚ್ 20ರಂದು ಪ್ರಾರಂಭವಾಗಲಿದೆ ಎಂದು ವರದಿಗಳು ಸೂಚಿಸಿವೆ. ಧನುಷ್ ಅವರು ಅಪ್ರತಿಮ ಸಂಗೀತಗಾರನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಅರುಣ್ ಮಾಥೇಶ್ವರನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಶೀರ್ಷಿಕೆ ಇಡದ ಈ ಚಿತ್ರ 2025ರ ಮಧ್ಯದಲ್ಲಿ ತೆರೆಕಾಣುವ ನಿರೀಕ್ಷೆಯಿದೆ.
ಧನುಷ್ ಹಾಗೂ ಅರುಣ್ ಮಾಥೇಶ್ವರನ್ ಕ್ಯಾಪ್ಟನ್ ಮಿಲ್ಲರ್ ಬಳಿಕ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಇಳಯರಾಜ ಅವರು ಈ ಹಿಂದೆ ಅಧು ಒರು ಕಾನ ಕಾಲಮ್ ಸಿನಿಮಾಗೆ ಸಂಗೀತ ನೀಡಿದ್ದರು. ಈ ಚಿತ್ರದಲ್ಲಿ ಧನುಷ್ ಪ್ರಮುಖ ಪಾತ್ರ ನಿರ್ವಹಿದ್ದರು. ಇದೀಗ ಇಳಯರಾಜರ ಜೀವನಾಧಾರಿತ ಕಥೆಗೆ ಧನುಷ್ ಜೀವ ತುಂಬಲಿದ್ದಾರೆ.
ಇಳಯರಾಜ ಅವರು ತಮ್ಮ 47 ವರ್ಷಗಳ ಸಂಗೀತ ಪಯಣದಲ್ಲಿ 20,000ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಸರಿಸುಮಾರು 1,000 ಚಿತ್ರಗಳಿಗೆ ಸಂಗೀತ ಒದಗಿಸಿದ್ದಾರೆ. 7,000 ಹಾಡುಗಳು ಇವರ ಬತ್ತಳಿಕೆಯಿಂದ ಬಂದಿದೆ. ಪ್ರತಿಷ್ಟಿತ ಪ್ರಶಸ್ತಿಗಳಾದ ಆಸ್ಕರ್ ಮತ್ತು ಗ್ರ್ಯಾಮಿ ವಿಜೇತ ಸಂಗಿತ ಸಂಯೋಜಕ ಎ.ಆರ್. ರೆಹಮಾನ್ ಅವರು 1986ರಲ್ಲಿ ಇಳಯರಾಜ ಅವರ ಮಾರ್ಗದರ್ಶನದಲ್ಲಿ ತಮ್ಮ ಸಂಗೀತಪಯಣ ಪ್ರಾರಂಭಿಸಿದ್ದು ಗಮನಾರ್ಹ ವಿಷಯ.