ದಕ್ಷಿಣ ಚಿತ್ರರಂಗದ ಬಹುಬೇಡಿಕೆ ತಾರೆಯರಾದ ಧನುಷ್ ಮತ್ತು ನಾಗಾರ್ಜುನ ಅಕ್ಕಿನೇನಿ ಮುಖ್ಯಭೂಮಿಕೆಯ ಬಹುನಿರೀಕ್ಷಿತ 'ಕುಬೇರ' ಚಿತ್ರದ ಗ್ಲಿಂಪ್ಸ್ ಅನಾವರಣಗೊಂಡಿದೆ. ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ಜಿಮ್ ಸರ್ಭ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಗ್ಲಿಂಪ್ಸ್ ಹಂಚಿಕೊಂಡಿರುವ ಸೌತ್ ಸಿನಿಮಾ ಇಂಡಸ್ಟ್ರಿಯ ಮತ್ತೋರ್ವ ಸೂಪರ್ ಸ್ಟಾರ್ ಮಹೇಶ್ ಬಾಬು, ''ಕುಬೇರ ಗ್ಲಿಂಪ್ಸ್ ಆ್ಯಕ್ಷನ್, ಡ್ರಾಮಾ ಮತ್ತು ಸಿನಿಮಾಟೋಗ್ರಫಿಯ ಮಿಶ್ರಣ. ಆಲ್ ದಿ ವೆರಿ ಬೆಸ್ಟ್'' ಎಂದು ಬರೆದುಕೊಂಡಿದ್ದಾರೆ.
'ಕುಬೇರ' ಚಿತ್ರದ ಮೊದಲ ನೋಟಕ್ಕಾಗಿ ಪ್ರೇಕ್ಷಕರು ಬಹಳ ದಿನಗಳಿಂದ ಕಾತರರಾಗಿದ್ದರು. ಪೋಸ್ಟರ್, ಸಣ್ಣ ಗ್ಲಿಂಪ್ಸ್ ಸಿನಿಮಾ ಸ್ಟೋರಿಯ ಸಣ್ಣ ಸುಳಿವು ಬಿಟ್ಟುಕೊಟ್ಟಿತ್ತು. ಇದೀಗ ಚಿತ್ರದ ಒಂದು ನೋಟ ಸಿನಿಪ್ರಿಯರಿಗೆ ಲಭ್ಯವಾಗಿದೆ. ಚಿತ್ರದಲ್ಲಿ ಧನುಷ್ ಮತ್ತು ನಾಗಾರ್ಜುನ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರಗಳಿಗೆ ಜೀವ ತುಂಬಿರೋದು ಸ್ಪಷ್ಟವಾಗಿದೆ. ಇತ್ತೀಚೆಗೆ ಅನಿಮಲ್ ಸಿನಿಮಾದಲ್ಲಿ ತಮ್ಮ ನಟನೆಯ ಮೂಲಕ ಎಲ್ಲರ ಮನಗೆದ್ದಿರುವ ರಶ್ಮಿಕಾ ಮಂದಣ್ಣ ಮತ್ತು ಜಿಮ್ ಸರ್ಭ್ ಅವರ ನೋಟ ಕೂಡಾ ಉತ್ತಮವಾಗಿ ಮೂಡಿಬಂದಿದೆ.
ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ಧನುಷ್ ಮುಖ್ಯಭೂಮಿಕೆಯ ಕುಬೇರ ಸಿನಿಮಾ ಘೋಷಣೆಯಾದಾಗಿನಿಂದಲೂ ಸಖತ್ ಸುದ್ದಿಯಲ್ಲಿದೆ. ಶೇಖರ್ ಕಮ್ಮುಲ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಡಿಸೆಂಬರ್ 31 ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ.