ಶೂಟಿಂಗ್ ಹಿನ್ನೆಲೆ ಸಂಚಾರ ಅಸ್ತವ್ಯಸ್ತ ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಧನುಷ್ ಮತ್ತು ಚಿತ್ರತಂಡ ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾದ ಚಿತ್ರೀಕರಣಕ್ಕಾಗಿ ದಕ್ಷಿಣ ಭಾರತದ ಪವಿತ್ರ ನಗರ ತಿರುಪತಿಗೆ ಆಗಮಿಸಿದ ಹಿನ್ನೆಲೆ, ಅಲಿಪಿರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸೌತ್ ಸೂಪರ್ ಸ್ಟಾರ್ ಧನುಷ್ ಮತ್ತು ಅವರ ಸಿನಿಮಾದ ಶೂಟಿಂಗ್ ನೋಡಲು ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ ಹಿನ್ನೆಲೆ, ಇಂದು ಹರೇ ರಾಮ ಹರೇ ಕೃಷ್ಣ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಧನುಷ್ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ. ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಹಿನ್ನೆಲೆ, ನಟನನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರು. ಸುಮಾರು 2 ಕಿಲೋಮೀಟರ್ನಷ್ಟು ದೂರ ವಾಹನಗಳು ನಿಂತಿದ್ದವು. ಪರಿಣಾಮ, ಪ್ರಯಾಣಿಕರು ಸಂಚರಿಸಲು ಪರದಾಡುವಂತಾಯಿತು. ಈ ಟ್ರಾಫಿಕ್ ಜಾಮ್‌ನಿಂದಾಗಿ ತಿರುಮಲಕ್ಕೆ ತೆರಳುವ ಭಕ್ತರು ಸಹ ತೊಂದರೆ ಅನುಭವಿಸುವಂತಾಯ್ತು.
ತಿರುಪತಿಯಲ್ಲಿ ಚಿತ್ರೀಕರಣ ಜೋರು: ಈ ಚಿತ್ರವನ್ನು ಶೇಖರ್ ಕಮ್ಮುಲ ನಿರ್ದೇಶಿಸುತ್ತಿದ್ದಾರೆ. ಧನುಷ್ ಮತ್ತು ನಾಗಾರ್ಜುನ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಇಬ್ಬರೂ ತಾರೆಯರು ಸದ್ಯ ತಿರುಪತಿಯ ಅಲಿಪಿರಿಯಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು: ಇಂದು ಬೆಳಗ್ಗೆ ಚಿತ್ರೀಕರಣ ಆರಂಭವಾಗಿ, ಅಲಿಪಿರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಒಂದೆಡೆ ಯಾತ್ರಾರ್ಥಿಗಳು ತಿರುಮಲಕ್ಕೆ ತೆರಳುತ್ತಿದ್ದರೆ, ಮತ್ತೊಂದೆಡೆ ಶೂಟಿಂಗ್ ನಡೆಯುತ್ತಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಸ್ಥಳೀಯರು ಹಾಗೂ ಭಕ್ತರಿಗೆ ತೊಂದರೆಯಾಯಿತು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಟ್ರಾಫಿಕ್ ಸಮಸ್ಯೆ ಬಗೆಹರಿಸಿದರು. ಈ ವೇಳೆ ಕೆಲ ಸ್ಥಳೀಯರು ಪೊಲೀಸರೊಂದಿಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಜನದಟ್ಟಣೆಯ, ಕಿರಿದಾದ ರಸ್ತೆಯಲ್ಲಿ ಚಿತ್ರೀಕರಣ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಆದ್ರೆ, ಈ ಚಿತ್ರದ ಪ್ರೊಡಕ್ಷನ್ ಯೂನಿಟ್ ಚಿತ್ರೀಕರಣಕ್ಕೆ ಮುಂಗಡವಾಗಿ ಒಪ್ಪಿಗೆ ಪಡೆದಿದೆಯಂತೆ.
ಇದನ್ನೂ ಓದಿ:ಅಭಿಮಾನಿಯೊಂದಿಗೆ ಶಾರುಖ್ ಖಾನ್: ಎಮೋಶನಲ್ ವಿಡಿಯೋ ವೈರಲ್
ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ವಿಶೇಷ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಧನುಷ್ ಮತ್ತು ನಾಗಾರ್ಜುನ ಅವರಲ್ಲದೇ, ಬಹುಭಾಷೆಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಸಹ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವನ್ನು ಸದ್ಯ ತಾತ್ಕಾಲಿಕವಾಗಿ 'D51' ಹೆಸರಿಸಲಾಗುತ್ತಿದೆ. ಸಿನಿಮಾದ ಅಧಿಕೃತ ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಇನ್ನಷ್ಟೇ ಬಹಿರಂಗಪಡಿಸಬೇಕಿದೆ. ಸಿನಿಮಾ ಕುರಿತು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:'ಕರಟಕ ದಮನಕ' ಟೈಟಲ್ ಸಾಂಗ್ ರಿಲೀಸ್: 'ಅಂಬಿ' ವಿಶೇಷ ವಿಡಿಯೋ ಅನಾವರಣ