ವಾದ ವಿವಾದ, ಜಗಳ, ಮನಸ್ತಾಪಗಳಿಂದ ಕೂಡಿದ್ದ ಬಿಗ್ ಬಾಸ್ ಮನೆಯೀಗ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಈ ವಾರ ಎಮೋಶನಲ್ ವೀಕ್ ಆಗಿಬಿಟ್ಟಿದೆ. ಇತರರೊಂದಿಗೆ ಅದೆಷ್ಟೇ ಆರ್ಭಟಿಸಿದರೂ, ತಮ್ಮವರನ್ನು ಕಂಡೊಡನೆ ಸ್ಪರ್ಧಿಗಳ ಕಣ್ಣಂಚು ಒದ್ದೆಯಾಗಿಬಿಟ್ಟಿದೆ. ಕೆಲವರೊಂತೂ ಕಣ್ಣೀರಧಾರೆ ಹರಿಸಿದ್ದು, ವೀಕ್ಷಕರೂ ಕೂಡಾ ಮರುಗಿದ್ದಾರೆ.
ಈಗಾಗಲೇ ಭವ್ಯಾ ಗೌಡ, ತ್ರಿವಿಕ್ರಮ್, ರಜತ್ ಕಿಶನ್, ಉಗ್ರಂ ಮಂಜು, ಗೌತಮಿ ಜಾಧವ್ ಅವರ ಕುಟುಂಬಸ್ಥರು ಮನೆಗೆ ಬಂದು ಹೋಗಿದ್ದಾರೆ. ಇಂದಿನ ಸಂಚಿಕೆಯಲ್ಲಿ ಧನರಾಜ್ ಆಚಾರ್ ಅವರ ಕೂಡುಕುಟುಂಬ ಬಂದಿದೆ. ನಾಲ್ಕೈದು ಮಂದಿಯಲ್ಲ ಸರಿಸುಮಾರು 30 ಮಂದಿ ಬಂದಂತೆ ತೋರಿದೆ. ದೊಡ್ಡ ಕುಟುಂಬವೇ ದೊಡ್ಮನೆ ಪ್ರವೇಶಿಸಿದ್ದು, ಮನೆಯ ಇತರೆ ಸ್ಪರ್ಧಿಗಳ ಜೊತೆಗೆ, ಪ್ರೇಕ್ಷಕರೂ ಕೂಡಾ ಹುಬ್ಬೇರಿಸಿದ್ದಾರೆ. ಇದರ ಒಂದು ಸುಳಿವನ್ನು 'ದೊಡ್ಮನೆ ತುಂಬಾ ನಿಷ್ಕಲ್ಮಶ ಪ್ರೀತಿಧಾರೆ', ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಶೀರ್ಷಿಕೆಯಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಾಣಬಹುದು.
ಬಿಗ್ ಬಾಸ್ ಮನೆಯ ಮುಖ್ಯದ್ವಾರದ ಬಳಿ ಸರಿಸುಮಾರು 30 ಮಂದಿ ನಿಂತಿರೋ ದೃಶ್ಯದೊಂದಿಗೆ ಬಿಗ್ ಬಾಸ್ ಪ್ರೋಮೋ ಅನಾವರಣಗೊಂಡಿದೆ. ಇದನ್ನು ಕಂಡು ಧನರಾಜ್ ಅವರಿಗಾದ ಖುಷಿ ವರ್ಣನಾತೀತ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಧನರಾಜ್ ದೊಡ್ಡ ಕುಟುಂಬ ಎಂಬ ಹಿನ್ನೆಲೆ ದನಿಯೊಂದಿಗೆ ಪ್ರೋಮೋ ಪ್ರಾರಂಭವಾಗಿದೆ. ಎಲ್ಲರೂ ಸೇರಿ ಮನೆಯ ಆಂಗಣದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಕರಾವಳಿಯ ಪಿಲಿಕುಣಿತ ಪ್ರೋಮೋದ ಆಕರ್ಷಣೆ ಅಂದ್ರೆ ತಪ್ಪಾಗಲ್ಲ.