ಕನ್ನಡ ಚಿತ್ರರಂಗದ ಹೆಸರಾಂತ ನಟ-ನಿರ್ಮಾಪಕ ಡಾಲಿ ಧನಂಜಯ್ ಮನೆಯಲ್ಲೀಗ ಮೌನ. ಆಪ್ತರನ್ನು ಕಳೆದುಕೊಂಡ ದುಃಖದಲ್ಲಿ ಸಂಪೂರ್ಣ ಕುಟುಂಬವಿದೆ. ಧನಂಜಯ್ ಅಜ್ಜಿ ಮಲ್ಲಮ್ಮ ತಮ್ಮ 95ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆ ಹಿನ್ನೆಲೆಯಲ್ಲಿ ಕಳೆದ ದಿನ ಮಲ್ಲಮ್ಮ ಮೃತಪಟ್ಟಿದ್ದಾರೆ. ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅವರಿಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.
ಡಾಲಿ ಧನಂಜಯ್ ಪೋಸ್ಟ್: ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಚ್ಚುಮೆಚ್ಚಿನ ಅಜ್ಜಿ ಜೊತೆ ಕಳೆದ ಸುಂದರ ಕ್ಷಣದ ಮೂರು ಫೋಟೋಗಳನ್ನು ಧನಂಜಯ್ ಹಂಚಿಕೊಂಡಿದ್ದಾರೆ. ಪೋಸ್ಟ್ಗೆ, ''ಜೊತಿಗಿರರನ್ನ ಚೆನ್ನಾಗ್ ನೋಡ್ಕ್ಯಬೇಕು ಗೊತ್ತಾತ, ಅವರು ನಿನ್ನ ಚೆನ್ನಾಗ್ ನೋಡ್ಕೆಂತರೆ, ಗೊತ್ತಾತೇನೋ. ನಿನ್ನ ಮಾತು ನಿನ್ನ ಬದುಕು ನನ್ನೆದೆಯೊಳಗೆ ನಿರಂತರ ಉರಿಯುವ ದೀಪ. ಹೋಗಿ ಬಾ ಮಲ್ಲವ್ವ'' ಎಂದು ಭಾವನಾತ್ಮಕ ಬರಹವನ್ನು ಹಂಚಿಕೊಂಡಿದ್ದಾರೆ. ಈ ಬರಹ ನೆಟ್ಟಿಗರ ಮನ ಮುಟ್ಟಿದೆ.
ಸ್ಯಾಂಡಲ್ವುಡ್ ಅಲ್ಲದೇ ಬಹುಭಾಷೆಗಳಲ್ಲಿಯೂ ಗುರುತಿಸಿಕೊಂಡಿರುವ ಧನಂಜಯ್ ಸದಾ ನನ್ನೂರು, ನನ್ನ ಕುಟುಂಬ ಅಂತಿದ್ದವರು. ಎಷ್ಟೇ ಆಧುನಿಕತೆಗೆ ಒಗ್ಗಿಕೊಂಡರೂ ಸಂಪ್ರದಾಯ ಮರೆತಿಲ್ಲ. ಕುಟುಂಬಸ್ಥರು, ಅಜ್ಜಿ ಅಂದ್ರೆ ಪಂಚಪ್ರಾಣ. ಪ್ರತೀ ಬಾರಿ ಚುನಾವಣೆ ವೇಳೆ ಮಲ್ಲಮ್ಮ ಅವರು ಮೊಮ್ಮಗ ಧನಂಜಯ್ ಜೊತೆ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಗಮನ ಸೆಳೆಯುತ್ತಿದ್ದರು. ಆದ್ರೀಗ ಧನಂಜಯ್ ತಮ್ಮ ಅಚ್ಚುಮೆಚ್ಚಿನ ಅಜ್ಜಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಸೊಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ನಟನಿಗೆ ಧೈರ್ಯ ತುಂಬುತ್ತಿದ್ದಾರೆ. ಜೊತೆಗೆ, ಸಂತಾಪ ಸೂಚಿಸುತ್ತಿದ್ದಾರೆ.