ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ದರ್ಶನ್ ಅವರನ್ನು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಬಹಳಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಬಿಗ್ ಸ್ಕ್ರೀನ್ನಲ್ಲಿ ಯಾವಾಗ ಅವರನ್ನು ನೋಡುತ್ತೇವೋ? ಅದ್ಯಾವಾಗ ಹಬ್ಬದ ವಾತಾವರಣ ಮತ್ತೆ ನಿರ್ಮಾಣ ಆಗುತ್ತದೆಯೋ? ಎಂದು ಹೆಚ್ಚಿನ ಸಂಖ್ಯೆಯ ಫ್ಯಾನ್ಸ್ ಕಾತರರಾಗಿದ್ದಾರೆ. ಅದಕ್ಕೀಗ ಅವರ ಸಹೋದರ ದಿನಕರ್ ತೂಗುದೀಪ ಶುಭ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
ಹೌದು, ಅಭಿಮಾನಿಗಳಿಗಾಗಿ ನಟನ ಹಳೇ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಕೆಲ ವಾರಗಳ ಹಿಂದಷ್ಟೇ ಕರಿಯ ಚಿತ್ರವನ್ನು ರೀ ರಿಲೀಸ್ ಮಾಡಲಾಗಿತ್ತು. ಇದೀಗ ಅವರ ಸೂಪರ್ ಹಿಟ್ ನವಗ್ರಹ ಸಿನಿಮಾವನ್ನು ಮರು ಬಿಡುಗಡೆಗೊಳಿಸಲು ಸಿದ್ಧತೆ ನಡೆದಿದೆ. ಈ ವಿಚಾರವನ್ನು ದಿನಕರ್ ತೂಗುದೀಪ ತಮ್ಮ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಹಂಚಿಕೊಂಡಿದ್ದಾರೆ. ವಿಷಯ ತಿಳಿದ ಡಿ ಬಾಸ್ ಫ್ಯಾನ್ಸ್ ಸಂತಸಗೊಂಡಿದ್ದಾರೆ.
ಸಿನಿಮಾದ ಪೋಸ್ಟರ್ ಹಂಚಿಕೊಂಡ ದಿನಕರ್ ತೂಗುದೀಪ, ''ನನ್ನ ನಿರ್ದೇಶನದ 2ನೇ ಚಿತ್ರ - 'ನವಗ್ರಹ', ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಬೆಳ್ಳಿ ತೆರೆಯ ಮೇಲೆ ತಂದ ಒಂದು ಪ್ರಾಮಾಣಿಕ ಪ್ರಯತ್ನ. 16 ವರ್ಷಗಳ ಹಿಂದೆ ಬಿಡುಗಡೆ ಆಗಿ ನಿಮ್ಮೆಲ್ಲರ ಪ್ರೀತಿ-ಪ್ರೋತ್ಸಾಹದಿಂದ ಇಂದಿಗೂ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ಒತ್ತಾಯದ ಫಲವಾಗಿ ಇದೇ ನವೆಂಬರ್ 8 ರಂದು ಮರು ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನೋಡಿ ಆನಂದಿಸಿ'' ಎಂದು ಬರೆದುಕೊಂಡಿದ್ದಾರೆ.