ಆ್ಯಕ್ಷನ್ ಹೀರೋ ವಿದ್ಯುತ್ ಜಮ್ವಾಲ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕ್ರೆಕ್: ಜೀತೇಗಾ ತೊ ಜೀಯೇಗಾ' ಇಂದು ತೆರೆಗಪ್ಪಳಿಸಿದೆ. ಮತ್ತೊಂದೆಡೆ ಯಾವಿ ಗೌತಮ್ ನಟನೆಯ 'ಆರ್ಟಿಕಲ್ 370' ಕೂಡ ಚಿತ್ರಮಂದಿರ ಪ್ರವೇಶಿಸಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸುತ್ತಿದೆ. ಬಾಲಿವುಡ್ನ ಎರಡು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಆದ ಹಿನ್ನೆಲೆ, ಬಾಕ್ಸ್ ಆಫೀಸ್ನಲ್ಲಿ ಬಿಗ್ ಫೈಟ್ ಪಕ್ಕಾ ಅಂತಾರೆ ಸಿನಿ ಪಂಡಿತರು.
ಆದಿತ್ಯ ದತ್ ನಿರ್ದೇಶನದ 'ಕ್ರೆಕ್' ಸಿನಿಮಾದಲ್ಲಿ ನೋರಾ ಫತೇಹಿ, ಅರ್ಜುನ್ ರಾಂಪಾಲ್ ಮತ್ತು ಆ್ಯಮಿ ಜಾಕ್ಸನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಾಂಗ್ಸ್ ಮತ್ತು ಟ್ರೇಲರ್‌ಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿದ್ದ ಈ ಚಿತ್ರ ಫೈನಲಿ ತೆರೆಗಪ್ಪಳಿಸಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. 'ಆರ್ಟಿಕಲ್ 370' ಜೊತೆ ಮುಖಾಮುಖಿಯಾಗಿದೆ.
'ಕ್ರೆಕ್' ಭಾರತದಲ್ಲಿ ತನ್ನ ಮೊದಲ ದಿನ 2-3 ಕೋಟಿ ರೂ. ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಆರಂಭಿಕ ದಿನದ ಟಿಕೆಟ್‌ಗಳು 99 ರೂ.ಗಳಿಗೆ ಲಭ್ಯವಿದೆ. 750ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಗೊಂಡಿದೆ. ಜಾಗತಿಕ ಮಟ್ಟದಲ್ಲಿ 2 ಕೋಟಿ ರೂ.ಗೂ ಅಧಿಕ ಹಣ ಗಳಿಸುವ ನಿರೀಕ್ಷೆ ಇದೆ.
ಯಾಮಿ ಗೌತಮ್ ಮತ್ತು ಪ್ರಿಯಾಮಣಿ ಅಭಿನಯದ ಪೊಲಿಟಿಕಲ್ ಥ್ರಿಲ್ಲರ್ ಚಿತ್ರ ಆರ್ಟಿಕಲ್ 370 ಕೂಡ ಇಂದೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಆದಿತ್ಯ ಸುಹಾಸ್ ಜಂಭಳೆ ನಿರ್ದೇಶನದ ಈ ಚಿತ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ವಿಚಾರವನ್ನು ಆಧರಿಸಿದೆ. ಮುಂಗಡ ವ್ಯವಹಾರ ಉತ್ತಮವಾಗಿದೆ.