ಬಾಲಿವುಡ್ ನಟಿ, ರೂಪದರ್ಶಿ ಪೂನಂ ಪಾಂಡೆ ಅವರು ತಮ್ಮ ಬೋಲ್ಡ್ ವ್ಯಕ್ತಿತ್ವ ಮತ್ತು ವಿವಾದಗಳಿಂದ ಸುದ್ದಿಯಾಗಿದ್ದರು. ಜನರ ಗಮನ ಸೆಳೆದಿದ್ದ ನಟಿ ತನ್ನ ಕಿರಿವಯಸ್ಸಿನಲ್ಲೇ ಕೊನೆಯುಸಿರೆಳೆದಿದ್ದಾರೆ. ನಟಿಯ ತಂಡ ಬಿಡುಗಡೆ ಮಾಡಿರೋ ಹೇಳಿಕೆ ಪ್ರಕಾರ, ಗರ್ಭಕಂಠದ ಕ್ಯಾನ್ಸರ್ನಿಂದ ಪಾಂಡೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಪೂನಂ ಪಾಂಡೆ 2013 ರಲ್ಲಿ 'ನಶಾ' ಚಿತ್ರದ ಮೂಲಕ ಬಾಲಿವುಡ್ನಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. ಅಂದಿನಿಂದ, ನಟಿ ಸಾಕಷ್ಟು ಟ್ರೋಲ್, ಟೀಕೆ, ವಿವಾದಗಳಿಗೆ ಸಿಲುಕಿಕೊಂಡಿದ್ದರು. ನಟಿಯ ಪ್ರಮುಖ ವಿವಾದಗಳ ಒಂದು ಸಣ್ಣ ಚಿತ್ರಣ ಇಲ್ಲಿದೆ.
ರಾಜ್ ಕುಂದ್ರಾ ವಿರುದ್ಧ ಪೂನಂ ಪಾಂಡೆ ಆರೋಪ: 'ಲಾಕ್ ಅಪ್' ಸ್ಪರ್ಧಿ ಹಲವು ವಿವಾದಗಳಲ್ಲಿ ಸಿಲುಕಿದ್ದರು. ಅದಾಗ್ಯೂ, ಹೆಚ್ಚಿನವರ ಗಮನ ಸೆಳೆದದ್ದು ರಾಜ್ ಕುಂದ್ರಾ ಅವರ ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪ ಪ್ರಕರಣ. ವರದಿಗಳ ಪ್ರಕಾರ, ರಾಜ್ ಕುಂದ್ರಾ ಭಾಗಿಯಾಗಿರುವ ಸಂಸ್ಥೆಯೊಂದಿಗೆ ಕೈ ಜೋಡಿಸಲು ಪೂನಂ ಅವರಿಗೆ ಬೆದರಿಸಲಾಗಿತ್ತಂತೆ. ಆದರೆ ನಟಿ ನಿರಾಕರಿಸಿದ್ದರು. ಈ ಹಿನ್ನೆಲೆ ಸೇಡು ತೀರಿಸಿಕೊಳ್ಳಲು ನಟಿಯ ಫೋನ್ ನಂಬರ್ ಸೋರಿಕೆ ಮಾಡಲಾಗಿತ್ತು. ಇದು ಸ್ವತಃ ಪೂನಂ ಪಾಂಡೆ ಅವರೇ ಮಾಡಿರುವ ಆರೋಪ.
ಪತಿ ಸ್ಯಾಮ್ ಬಾಂಬೆ ಮೇಲೆ ಕೌಟುಂಬಿಕ ದೌರ್ಜನ್ಯ ಆರೋಪ: ಪೂನಂ ಪಾಂಡೆ 2020ರಲ್ಲಿ ವಿವಾಹವಾದ ಕೆಲವೇ ದಿನಗಳಲ್ಲಿ, ಪತಿ ಸ್ಯಾಮ್ ಬಾಂಬೆ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು. ಅವರನ್ನು ಬಂಧಿಸಲಾಗಿತ್ತು. ಅಂತಿಮವಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅದಾಗ್ಯೂ, ಕೆಲ ಸಮಯದ ಬಳಿಕ ಈ ದಂಪತಿ ರಾಜಿ ಮಾಡಿಕೊಂಡಂತೆ ಕಂಡು ಬಂದಿತ್ತು.
ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ನಟಿಯ ಬಂಧನ:ಲಾಕ್ಡೌನ್ ಸಮಯದಲ್ಲಿಯೂ ಪೂನಂ ಪಾಂಡೆ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಲಾಕ್ಡೌನ್ ಸಮಯದಲ್ಲಿ, ಪತಿ ಸ್ಯಾಮ್ ಅವರೊಂದಿಗೆ ವಾಕ್ಗೆ ಹೋಗಿದ್ದರು. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಪೊಲೀಸರು ಬಂಧಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ನಟಿಯನ್ನು ತೀವ್ರವಾಗಿ ಟೀಕಿಸಲಾಗಿತ್ತು.