ಬಹು ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಅತುಲ್ ಪರ್ಚುರೆ ಇಹಲೋಕ ತ್ಯಜಿಸಿದ್ದಾರೆ. ತಮ್ಮ 57ನೇ ವಯಸ್ಸಿನಲ್ಲಿ ನಿಧನರಾದ ಹಾಸ್ಯ ನಟನ ನಿಧನಕ್ಕೆ ಭಾರತೀಯ ಚಿತ್ರರಂಗ ಸಂತಾಪ ಸೂಚಿಸಿದೆ. ಸೋಮವಾರ ಅವರು ಮೃತಪಟ್ಟಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಹುದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬಂದಿದೆ. ಮರಾಠಿ ಮತ್ತು ಹಿಂದಿ ಮನರಂಜನಾ ಕ್ಷೇತ್ರದಲ್ಲಿ ಅತುಲ್ ಪರ್ಚುರೆ ತಮ್ಮ ಬಹುಮುಖ ಪ್ರತಿಭೆ, ಹಾಸ್ಯಕ್ಕಾಗಿ ಹೆಸರು ವಾಸಿಯಾಗಿದ್ದರು.
ನಟನ ನಿಧನದ ಸುದ್ದಿ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಬಾಲಿವುಡ್ನ ಬೇಡಿಕೆಯ ನಟ ಅರ್ಜುನ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. "ನನಗೆ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಗಲಿಲ್ಲ. ಆದರೆ, ಪಾತ್ರ ಯಾವುದೇ ಇರಲಿ ಅತ್ಯುತ್ತಮವಾಗಿ ನಿಭಾಯಿಸಿದ್ದು, ಬಹಳ ಇಷ್ಟವಾಗುತ್ತಿದ್ದರು. ಅವರು ಹಲವು ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ತಿಳಿಸಿದ್ದಾರೆ.
ರಂಗಭೂಮಿ, ಹಿರಿತೆರೆ ಮತ್ತು ಕಿರುತೆರೆಗೆ ಅತುಲ್ ಅವರ ಮಹತ್ವದ ಕೊಡುಗೆಗಳಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡಾ ಗೌರವ ಸಲ್ಲಿಸಿದ್ದಾರೆ. "ಅವರ ಅಕಾಲಿಕ ಮರಣವು ನೋವು ನೀಡಿದೆ" ಎಂದು ಸಿಎಂ ಶಿಂಧೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಮರಾಠಿ ಚಿತ್ರರಂಗದಲ್ಲಿ ಅವರ ಪ್ರಭಾವದ ಬಗ್ಗೆ ಅವರು ಒತ್ತಿಹೇಳಿದರು.
ಈ ಹಿಂದೆ ಟಾಕ್ ಶೋನಲ್ಲಿ ನಟ ಅತುಲ್ ಪರ್ಚುರೆ ಅವರು ತಮ್ಮ ಕ್ಯಾನ್ಸರ್ನೊಂದಿಗಿನ ಹೋರಾಟವನ್ನು ಬಹಿರಂಗಪಡಿಸಿದರು. ತಮ್ಮ ಲಿವರ್ನಲ್ಲಿ 5 ಸೆಂ.ಮೀ ಗಡ್ಡೆಯಿದೆ ಎಂದು ತಿಳಿಸಿದ್ದರು. ತಮ್ಮ ಚಿಕಿತ್ಸೆ ವೇಳೆ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. "ರೋಗ ಇರುವುದು ತಿಳಿದ ನಂತರ ನನ್ನ ಮೊದಲ ವಿಧಾನ ತಪ್ಪಾಗಿತ್ತು, ಇದು ನನ್ನ ಮೇದೋಜೀರಕ ಗ್ರಂಥಿ ಮೇಲೆ ಪರಿಣಾಮ ಬೀರಿತ್ತು, ವಿವಿಧ ತೊಡಕುಗಳಿಗೆ ಕಾರಣವಾಯ್ತು" ಎಂದು ವಿವರಿಸಿದ್ದರು. ವೈದ್ಯರನ್ನು ಬದಲಿಸಿ ಸೂಕ್ತ ಚಿಕಿತ್ಸೆ ಪಡೆದ ಬಳಿಕ ಗುಣಮುಖರಾಗುವ ಭರವಸೆ ಹೊಂದಿದ್ದ ನಟ ದುರಾದೃಷ್ಟವಶಾತ್ ಸೋಮವಾರ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ.