ಈ ಸಿನಿಮಾ ಲೋಕ ಅನ್ನೋದು ಒಂದು ಕ್ರಿಯೇಟಿವ್ ಜಗತ್ತು. ಇಂಥ ಬಣ್ಣದ ಲೋಕದಲ್ಲಿ ಸಾಮಾಜಿಕ, ಪೌರಾಣಿಕ, ನೈಜ ಘಟನೆಗಳ ಕಥೆಗಳ ಜೊತೆ ಕಮರ್ಷಿಯಲ್ ಸಿನಿಮಾಗಳದ್ದೇ ಕಾರುಬಾರು. ಅದು ಕನ್ನಡ ಚಿತ್ರರಂಗದಿಂದ ಹಿಡಿದು, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ನಾನಾ ಭಾಷೆಗಳ ಚಿತ್ರರಂಗದವರೆಗೂ ಹಬ್ಬಿದೆ. ಸ್ಟಾರ್ ನಟರನ್ನಿಟ್ಟುಕೊಂಡು ಕಮರ್ಷಿಯಲ್ ಚಿತ್ರ ಮಾಡೋದು ಪ್ರೇಕ್ಷಕರಿಗೆ ಮನರಂಜನೆ ಕೊಡೋ ಉದ್ದೇಶ ಹೊಂದಿದ್ದರೂ ಲಾಭದ ವಿಚಾರವನ್ನಿಲ್ಲಿ ಅಲ್ಲಗೆಳೆಯುವಂತಿಲ್ಲ.
ಪೌರಾಣಿಕ ಕಥೆಗಳನ್ನು ಆಧರಿಸಿದ ಸಿನಿಮಾಗಳು: ಭಾರತೀಯ ಚಿತ್ರರಂಗದಲ್ಲಿ ಮೊದಲು ಪೌರಾಣಿಕ ಕಥೆಗಳನ್ನು ಆಧರಿಸಿದ ಸಿನಿಮಾಗಳು ಹೆಚ್ಚೆಚ್ಚು ಬರುತ್ತಿದ್ದವು. ಮೊದಲ ಮೂಕಿ ಚಿತ್ರ ರಾಜಾ ಹರಿಶ್ಚಂದ್ರದಿಂದ ಪ್ರಾರಂಭವಾದ ಈ ಪರಂಪರೆ, ಟಾಕಿ ಯುಗ ಪ್ರಾರಂಭವಾಗಿ ಭಾರತೀಯ ಪುರಾಣಗಳ ಕಥೆ ಮತ್ತು ಪಾತ್ರಗಳನ್ನಾಧರಿಸಿದ ಸಿನಿಮಾಗಳು ನಿರ್ಮಾಣ ಆಗುತ್ತಿದ್ವು. ಎಲ್ಲ ಭಾಷೆಗಳಲ್ಲೂ ಪೌರಾಣಿಕ ಚಿತ್ರಗಳು ಬಂದಿವೆ. ಅದರಲ್ಲೂ ತೆಲುಗಿನಲ್ಲಿ ಬಿಡುಗಡೆಯಾದಷ್ಟು ಪೌರಾಣಿಕ ಚಿತ್ರಗಳು ಬಹುಶಃ ಯಾವ ಭಾಷೆಯಲ್ಲೂ ಬಿಡುಗಡೆಯಾಗಿಲ್ಲ ಎಂದರೆ ತಪ್ಪಿಲ್ಲ. ಅದರಲ್ಲೂ ರಾಮಾಯಣ ಮತ್ತು ಮಹಾಭಾರತವನ್ನಾಧರಿಸಿದ ಸಾಕಷ್ಟು ಚಿತ್ರಗಳು ಬಿಡುಗಡೆಯಾಗಿವೆ. ಈ ವಿಷಯದಲ್ಲಿ ಕನ್ನಡ ಚಿತ್ರರಂಗ ಕೂಡಾ ಹಿಂದೆ ಬಿದ್ದಿಲ್ಲ. ಕನ್ನಡದ ಮೊದಲ ಟಾಕಿ ಚಿತ್ರ 'ಸತಿ ಸುಲೋಚನಾ'ದಿಂದ ಪ್ರಾರಂಭಿಸಿ, 70ರ ದಶಕದ ಕೊನೆಯವರೆಗೂ ಹಲವು ಪೌರಾಣಿಕ ಚಿತ್ರಗಳು ಬಂದಿವೆ.
ಈ ಮಧ್ಯೆ ಒಂದಿಷ್ಟು ವರ್ಷಗಳ ಕಾಲ ಸಾಮಾಜಿಕ ಸಿನಿಮಾಗಳು ಪ್ರೇಕ್ಷಕರನ್ನು ಮನರಂಜಿಸಿದವು. ಸಿನಿಮಾ ಮಂದಿಗೆ ಮತ್ತು ಪ್ರೇಕ್ಷಕರಿಗೆ ಅದೇ ಕಥೆಗಳನ್ನು ಕೊಟ್ಟು, ತೆಗೆದುಕೊಂಡು ಸುಸ್ತಾಗಿರುವ ಹಾಗೆ ಕಾಣುತ್ತಿದೆ. ಹಾಗಾಗಿ ಪುನಃ ಪುರಾಣದ ಕಥೆ ಮತ್ತು ಪಾತ್ರಗಳನ್ನು ಆಧರಿಸಿದ ಚಿತ್ರಗಳು ಹೆಚ್ಚಾಗಿ ಮೂಡಿ ಬರುತ್ತಿವೆ. ಪುರಾಣಕ್ಕೆ ಆಧುನಿಕತೆಯ ಸ್ಪರ್ಶ ನೀಡುವ ಪ್ರಯತ್ನಗಳಾಗುತ್ತಿವೆ. ಪೌರಾಣಿಕ ಮತ್ತು ಪುರಾಣ ಪುರುಷರನ್ನು ಆಧರಿಸಿದ ಚಿತ್ರಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.
ಜೈ ಹನುಮಾನ್: ಇದು ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಕೆಲ ತಿಂಗಳ ಹಿಂದಷ್ಟೇ 'ಜೈ ಹನುಮಾನ್' ಚಿತ್ರದಲ್ಲಿ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರು ಹನುಮಾನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲಾಯಿತು. ಕಾಂತಾರ ಎಂಬ ಅದ್ಭುತ ಚಿತ್ರದ ಮೂಲಕ ಡಿವೈನ್ ಸ್ಟಾರ್ ಎಂದೇ ಖ್ಯಾತರಾಗಿರುವ ಶೆಟ್ರ ಈ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಅಪ್ಡೇಟ್ಸ್ಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಅಶ್ವತ್ಥಾಮನನ್ನಾಧರಿಸಿದ ಚಿತ್ರ: ಇದಕ್ಕೂ ಮುನ್ನ 'ದಿ ಸಾಗಾ ಆಫ್ ಅಶ್ವತ್ಥಾಮ ಕಂಟಿನ್ಯೂಸ್' ಚಿತ್ರದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ಮಹಾಭಾರತದ ಅಶ್ವತ್ಥಾಮನಾಗಿ ಕಾಣಿಸಿಕೊಳ್ಳುತ್ತಿರುವ ವಿಷಯ ಕೇಳಿಬಂತು. ಈ ಚಿತ್ರ ಶುರುವಾಗುವ ಮೊದಲೇ, ಕಲ್ಕಿ 2898 ಎಡಿ ಚಿತ್ರದಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್ ಅಶ್ವತ್ಥಾಮನಾಗಿ ಪ್ರೇಕ್ಷಕರಿಗೆ ದರ್ಶನ ಕೊಟ್ಟರು. ಈ ಚಿತ್ರದಲ್ಲಿ ಅಶ್ವತ್ಥಾಮನಷ್ಟೇ ಅಲ್ಲದೇ ಮಹಾಭಾರತದ ಹಲವು ಪಾತ್ರಗಳು ಮರುಸೃಷ್ಟಿಯಾದವು.
ಮಹಾವತಾರ್:ಬಾಲಿವುಡ್ ನಟ ವಿಕ್ಕಿ ಕೌಶಲ್ - ನಿರ್ದೇಶಕ ಅಮರ್ ಕೌಶಿಕ್ ಕಾಂಬಿನೇಶನ್ನಲ್ಲಿ 'ಮಹಾವತಾರ್' ಶೀರ್ಷಿಕೆಯ ಸಿನಿಮಾವನ್ನು ಕೆಲ ದಿನಗಳ ಹಿಂದಷ್ಟೇ ಘೋಷಿಸಲಾಗಿದೆ. 'ಪರಶುರಾಮ'ನ ಕಥೆ ಹೇಳಲಿದೆ.
ಮಹಾವತಾರ್ ನರಸಿಂಹ: ಇದಾದ ಕೆಲವೇ ದಿನಗಳಲ್ಲಿ ಮಹಾವತಾರ್ ನರಸಿಂಹ ಎಂಬ ಇನ್ನೊಂದು ಸಿನಿಮಾ ಘೋಷಣೆ ಆಗಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಅರ್ಪಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ನರಸಿಂಹಾವತಾರವನ್ನು ತೋರಿಸಲಾಗುತ್ತದೆ.