ಲೆಜೆಂಡ್ ನಂದಮೂರಿ ತಾರಕ ರಾಮರಾವ್ ಅವರ 101ನೇ ಜನ್ಮದಿನ ಹಿನ್ನೆಲೆ, ಮೆಗಾಸ್ಟಾರ್ ಚಿರಂಜೀವಿ ಸೋಷಿಯಲ್ ಮೀಡಿಯಾದಲ್ಲಿ ನಮನ ಸಲ್ಲಿಸಿದ್ದಾರೆ. ದಂತಕಥೆಯೊಂದಿಗಿನ ಹಳೇ ಚಿತ್ರವನ್ನು ಹಂಚಿಕೊಂಡ ಮೆಗಾಸ್ಟಾರ್, ತೆಲುಗು ಜನರ ಮನದಲ್ಲಿ ಅಚಲವಾಗಿ ಉಳಿದಿರುವ ಎನ್‌ಟಿಆರ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚಿರಂಜೀವಿ ಟ್ವೀಟ್:ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಚಿರಂಜೀವಿ, "ಕೆಲವರ ಕೀರ್ತಿ ಅಮರ. ಭವಿಷ್ಯದ ಪೀಳಿಗೆಗೆ ಶಾಶ್ವತ ಉದಾಹರಣೆ. ಇಂದು ನಂದಮೂರಿ ತಾರಕ ರಾಮರಾವ್ ಅವರನ್ನು ಸ್ಮರಿಸುತ್ತ, ಭಾರತ ರತ್ನ ಪ್ರಶಸ್ತಿಯು ಅವರ ಸೇವೆಗೆ ಸೂಕ್ತ ಗೌರವ ಎಂದು ನಾನು ಭಾವಿಸುತ್ತೇನೆ. ತೆಲುಗು ಜನರ ಈ ಬಹುಕಾಲದ ಆಶಯವನ್ನು ಕೇಂದ್ರ ಸರ್ಕಾರ ಈಡೇರಿಸಲಿದೆ ಎಂಬ ಭರವಸೆ ಇದೆ'' ಎಂದು ಬರೆದುಕೊಂಡಿದ್ದಾರೆ.
ತೆಲುಗು ಚಿತ್ರರಂಗದ 'ಐಕಾನ್': ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು, ಎನ್‌ಟಿಆರ್ ಅವರನ್ನು ಸ್ಮರಿಸಿ ಎಕ್ಸ್ ಪೋಸ್ಟ್ ಶೇರ್ ಮಾಡಿದ್ದಾರೆ. ತೆಲುಗು ಚಿತ್ರರಂಗದ 'ಐಕಾನ್' ಎಂದು ಉಲ್ಲೇಖಿಸಿದ ಪ್ರಧಾನಿ ರಾಜಕೀಯದಲ್ಲಿ ಮರೆಯಲಾಗದ ಛಾಪು ಮೂಡಿಸಿದ 'ವಿಷನರಿ ಲೀಡರ್' ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. 'ಉತ್ತಮ ಸಮಾಜಕ್ಕಾಗಿ ಎನ್‌ಟಿಆರ್ ಅವರ ದೂರದೃಷ್ಟಿ'ಯನ್ನು ಈಡೇರಿಸಲು ನಾನು ಮತ್ತು ದೇಶ ಶ್ರಮಿಸುತ್ತದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.