ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಂದಿನ ಬಹು ನಿರೀಕ್ಷಿತ ಚಿತ್ರ 'ಕೃಷ್ಣಂ ಪ್ರಣಯ ಸಖಿ'. 'ಬಾನ ದಾರಿಯಲ್ಲಿ' ಸಿನಿಮಾ ನಂತರ ಗಣೇಶ್ ಒಂಬತ್ತು ಚೆಂದುಳ್ಳಿ ಚೆಲುವೆಯರ ಜೊತೆ ತೆರೆ ಹಂಚಿಕೊಂಡಿರುವ ರೊಮ್ಯಾಂಟಿಕ್ ಚಿತ್ರ. ಈಗಾಗಲೇ ಅನಾವರಣಗೊಂಡಿರುವ ಚಿತ್ರದ ಹಾಡುಗಳು ಈಗಾಗಲೇ ಸಿನಿ ಪ್ರೇಮಿಗಳ ಮನಸ್ಸು ಕದಿಯುತ್ತಿದೆ.
ಶ್ರೀನಿವಾಸರಾಜು ಈ ಬಾರಿ ರೊಮ್ಯಾಂಟಿಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾದ ಚಿನ್ನಮ್ಮ ಎಂಬ ಹಾಡು ಇತ್ತೀಚೆಗೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಅನಾವರಣಗೊಂಡಿತು. ಇದೀಗ ಆಲ್ ಇಂಡಿಯಾ ಯೂಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲಿ ಚಿನ್ನಮ್ಮ ಹಾಡು ಮೂರನೇ ಸ್ಥಾನದಲ್ಲಿದೆ. ಬಿಡುಗಡೆಯಾದ 5 ದಿನಗಳಲ್ಲಿ 8 ಮಿಲಿಯನ್ಗೂ ಅಧಿಕ ವೀಕ್ಷಣೆಗೊಂಡಿದೆ. ಮೊದಲ ಸ್ಥಾನದಲ್ಲಿ ದಳಪತಿ ವಿಜಯ್ ಅವರ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಚಿತ್ರದ ಚಿನ್ನ ಚಿನ್ನ ಕಣ್ಗಳ್ ಹಾಗೂ ಎರಡನೇ ಸ್ಥಾನದಲ್ಲಿ ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಚಿತ್ರದ ಥೀಮ್ ಆಫ್ ಕಲ್ಕಿ ಹಾಡುಗಳಿವೆ. ಇದೇ ವೇಗದಲ್ಲಿ ವೀಕ್ಷಣೆಯಾಗುತ್ತಿದ್ದರೆ, ಚಿನ್ನಮ್ಮ ಹಾಡು ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ.
ಗಣೇಶ್ ಬಹಳ ಇಷ್ಟಪಡುವ ಗೀತರಚನೆಕಾರರಾದ ಕವಿರಾಜ್ ಬರೆದಿರುವ ಪದಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಈ ಹಾಡು ಹಾಡಿದ್ದಾರೆ.