ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ನಟ ದರ್ಶನ್ ಸದಾ ಸಪೋರ್ಟಿವ್. ಇದೀಗ ಯುವ ನಟಿ ಜಾಜಿ ತಮ್ಮ ಹೆಸರಿನ ಜಾಜಿ ಆಲ್ಬಂ ಸಾಂಗ್ವೊಂದನ್ನ ಮಾಡಿದ್ದಾರೆ. ಇತ್ತೀಚೆಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕೈ ನೋವಿನ ನಡುವೆಯೂ ಕನ್ನಡದ ಪ್ರತಿಭೆಯನ್ನು ಪ್ರೋತ್ಸಾಹಿಸಲು ಜಾಜಿ ಆಲ್ಬಂ ಬಿಡುಗಡೆ ಮಾಡಿದರು.
ಮಾಜಿ ಉಪ ಮಹಾಪೌರ ಮೋಹನ್ ರಾಜು ಹಾಗೂ ಬಿ.ಸುನೀತಾ ಮೋಹನ್ ರಾಜು ಅವರ ಪುತ್ರಿ ಜಾಜಿ ನಟಿಸಿರುವ ಆಲ್ಬಂ ಸಾಂಗ್ ಇದು. ಈ ಹಾಡಿನ ಹೆಸರು ಕೂಡ ಜಾಜಿ ಅನ್ನೋದು ವಿಶೇಷ. ಹಾಡು ಬಿಡುಗಡೆ ಮಾಡಿ ಮಾತನಾಡಿದ ದರ್ಶನ್, ಈ ಹಾಡು ಬಿಡುಗಡೆ ಮಾಡುವುದಕ್ಕೂ ಮುಂಚೆ ಕೆಲವು ವಿಷಯ ಹೇಳುತ್ತೇನೆ. ಸ್ನೇಹಿತರಾದ ಮೋಹನ್ ರಾಜು ಅವರು ಸಿಕ್ಕಾಗ ತಮ್ಮ ಮಗಳು ನೃತ್ಯ ಕಲಿಯುತ್ತಿರುವ ವಿಷಯದ ಬಗ್ಗೆ ಹೇಳಿದ್ದರು. ಮಗಳ ಹೆಸರು ಜಾಜಿ ಎಂದರು. ಈಗಿನ ಟ್ರೆಂಡ್ನಲ್ಲಿ ಜಾಜಿ ಎನ್ನುವ ಹೆಸರು ಕೇಳಿ ಆಶ್ಚರ್ಯವಾಯಿತು. ಅವರ ಮಗನ ಹೆಸರು ಜಾಣ ಅಂತ ತಿಳಿದು ಇನ್ನೂ ಹೆಚ್ಚಿನ ಆಶ್ಚರ್ಯವಾಯಿತು. ಜಾಜಿ ಅವರ ನೃತ್ಯ ಎಷ್ಟು ಚೆನ್ನಾಗಿದೆ ಎಂದು ಈ ಹಾಡೇ ಹೇಳುತ್ತದೆ. ಡಿ ಬಿಟ್ಸ್ ಮೂಲಕ ಶೈಲಜಾ ನಾಗ್ ಹಾಗೂ ವಿ. ಹರಿಕೃಷ್ಣ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಮಗುವಿಗೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಬಳಿಕ ಜಾಜಿ ತಾಯಿ ಸುನೀತಾ ಮೋಹನ್ ರಾಜು ಮಾತನಾಡಿ, ನನಗೊಂದು ಕನಸು ಇತ್ತು. ಆ ಕನಸು ಇಂದು ನನಸಾಗಿದೆ. ನನ್ನ ಮಗಳ ಮೊದಲ ಹಾಡು ಜಾಜಿ. ದರ್ಶನ್ ಅವರು ಅವಳಿಗೆ ಪ್ರೋತ್ಸಾಹ ನೀಡಿದ್ದು ನಿಜಕ್ಕೂ ಅವಳ ಪುಣ್ಯ. ಇನ್ಮುಂದೆ ಅವಳ ಜವಾಬ್ದಾರಿ ಹೆಚ್ಚಿದೆ. ಹಾಡು ಚೆನ್ನಾಗಿ ಬರಲು ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.
ಇದನ್ನೂ ಓದಿ:BMW ಖರೀದಿಸಿದ ಕಾಟೇರ ನಿರ್ದೇಶಕ: ತರುಣ್ ಸುಧೀರ್ ಕಾರ್ ಡ್ರೈವ್ ಮಾಡಿದ ದರ್ಶನ್ - Tarun Sudhir BMW car