ಬಿಗ್ ಬಾಸ್ ಕನ್ನಡ ಸೀಸನ್ 11 ಮೂರನೇ ವಾರದ ಆಟ ಮುಂದುವರಿಸಿದೆ. ಜಗಳ, ಕಿರುಚಾಟ, ವಾದ ವಿವಾದಗಳು ಲೆಕ್ಕಕ್ಕಿಂತ ಕೊಂಚ ಹೆಚ್ಚೇ ಎನ್ನಬಹುದು. ಇಂದಿನ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ವರ್ಸಸ್ ಜಗದೀಶ್ ಅವರ ಮಾತಿನ ಅಬ್ಬರವನ್ನು ನೋಡಬಹುದು.
ಎರಡು ವಾರಗಳ ಹಿಂದೆ 'ಬಿಗ್ ಬಾಸ್ ಕನ್ನಡ ಸೀಸನ್ 11'ರ ಸ್ಪರ್ಧಿಗಳ ಪಟ್ಟಿ ರಿವೀಲ್ ಆದಾಗ ಅಚ್ಚರಿ ಮೂಡಿಸಿದ ಹೆಸರು ಚೈತ್ರಾ ಕುಂದಾಪುರ. ಹೊರ ಪ್ರಪಂಚದಲ್ಲಿ ಅವರ ಮೇಲೆ ಕೆಲ ಆರೋಪಗಳು ಕೇಳಿಬಂದು ಪ್ರಕರಣಗಳೂ ದಾಖಲಾಗಿದ್ದವು. ಮಾತುಗಾರ್ತಿ ಎಂದೇ ಹೆಸರುವಾಸಿಯಾಗಿದ್ದ ಚೈತ್ರಾ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಾಗ ಈ ಮನೆಯಲ್ಲಿ ಮಾತಿನ ಯುದ್ಧ ನಡೆಯುತ್ತದೆ ಎಂದೇ ಭಾವಿಸಿದ್ದರು. ಆದ್ರೆ ನಿರೀಕ್ಷಿಸಿದ್ದಷ್ಟು ಮಾತು ಚೈತ್ರಾ ಅವರಿಂದ ಬರಲಿಲ್ಲ. ಹಾಗಂತಾ ಸುಮ್ಮನೆಯೂ ಕುಳಿತಿಲ್ಲ. ಎದುರಾಳಿಗಳ ಮಾತಿಗೆ ಚಾಟಿ ಬೀಸುವ ಕೆಲಸ ಮುಂದುವರಿಸಿದ್ದಾರೆ. ವಾರಾಂತ್ಯದ ಎಪಿಸೋಡ್ನಲ್ಲಿ ಅವರಿಗೆ ಸಿಕ್ಕ ಸಲಹೆ ಬಳಿಕ ಮತ್ತಷ್ಟು ಸಕ್ರಿಯರಾಗಿದ್ದಾರೆ. ಅದರಂತೆ ಇದೀಗ ಜಗದೀಶ್ ಎದುರು ದನಿ ಏರಿಸಿದ್ದಾರೆ.
ಚೈತ್ರಾ ಕುಂದಾಪುರ ವಿರುದ್ಧ ಹೊರಗಡೆ ಹಲವು ಪ್ರಕರಣಗಳು ದಾಖಲಾಗಿದ್ದವು. ಇದರ ಲೆಕ್ಕವನ್ನು ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಅವರು ಕೊಟ್ಟಿದ್ದಾರೆ. ಇದು ವಾಕ್ಸಮರಕ್ಕೆ ಕಾರಣವಾಗಿದೆ. ಇಬ್ಬರ ನಡುವೆ ದೊಡ್ಡ ಜಗಳವೇ ನಡೆದು ಹೋಗಿದೆ.
''ನೀನಾ? ನಾನಾ? ಅಂತ ವಾಗ್ಯುದ್ಧಕ್ಕೆ ನಿಂತ ಜಗದೀಶ್ ಹಾಗೂ ಚೈತ್ರಾ'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ ಅಡಿ ಬಿಗ್ ಬಾಸ್ ಇಂದಿನ ಪ್ರೋಮೋ ಅನಾವರಣಗೊಳಿಸಿದೆ. ಇದು ಸಂಪೂರ್ನ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.