ಹೆಚ್ಚಾಗಿ ಆರ್ಭಟಗಳಲ್ಲೇ ಕಳೆದು ಹೋಗುವ ಕನ್ನಡ ಬಿಗ್ ಬಾಸ್ ಮನೆಯೀಗ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಸ್ಪರ್ಧಿಗಳ ಮನೆ ಮಂದಿ ಆಗಮಿಸುತ್ತಿದ್ದು, ಈ ವಾರ ಎಮೋಶನಲ್ ವೀಕ್ ಆಗಿ ಮಾರ್ಪಾಡಾಗಿದೆ. ಇಂದಿನ ಸಂಚಿಕೆಯಲ್ಲಿ ಧನರಾಜ್ ಆಚಾರ್, ಹನುಮಂತ ಮತ್ತು ಚೈತ್ರಾ ಕುಂದಾಪುರ ಕುಟುಂಬಸ್ಥರನ್ನು ಕಾಣಬಹುದಾಗಿದೆ.
'ದೊಡ್ಮನೆ ತುಂಬಾ ಸಂತಸ, ಸಂಭ್ರಮದ ಜೊತೆ ಒಂದಿಷ್ಟು ಕಣ್ಣೀರು' ಎಂಬ ಕ್ಯಾಪ್ಷನ್ನಡಿ ಪ್ರೋಮೋ ಅನಾವರಣಗೊಂಡಿದೆ. ಚೈತ್ರಾ ಕುಂದಾಪುರ ಅವರ ತಾಯಿ ಮತ್ತು ತಂಗಿ ದೊಡ್ಮನೆ ಪ್ರವೇಶಿಸಿದ್ದಾರೆ. ಮನೆಯೊಳಗೆ ಬರುತ್ತಿದ್ದಂತೆ ರಜತ್ ಅವರಿಗೆ ನನಗೆ ನೀವ್ ಬಾಸ್ ಎಂದು ಚೈತ್ರಾ ಕುಂದಾಪುರ ಅವರ ಸಹೋದರಿ ತಿಳಿಸಿದ್ದಾರೆ.
ಚೈತ್ರಾ ಕುಂದಾಪುರ ಭಾವುಕ:ಇನ್ನೂ ತಾಯಿ ಮಾತನಾಡಿ, ಎಲ್ಲಾ ಸೇರಿ ನನ್ನ ಮಗಳಿಗೆ ಕಳಪೆ ಕೊಟ್ರಿ. ಆದರೆ ಅವಳು ನಮಗೆ ಎಂದೆಂದಿಗೂ ಉತ್ತಮವೇ ಎಂದು ಹೇಳಿ ಚೈತ್ರಾ ಕುಂದಾಪುರಗೆ ಮೆಡಲ್ ಹಾಕಿದ್ದಾರೆ. ನಂತರ ಚೈತ್ರಾ ಮಾತನಾಡಿ, ಇವಳು (ತಂಗಿ) ಹುಟ್ಟಿದಾಗ ನನಗೆ ನಿಜವಾದ ಚಾಲೆಂಜ್ ಶುರುವಾಗುತ್ತದೆ. ಮೂರನೆಯದ್ದೂ ಹೆಣ್ಣಾಯ್ತು ಅನ್ನೋ ಮಾತುಗಳು ಬರುತ್ತೆ. ಅಪ್ಪ ಅಮ್ಮನ ಹೆಣಕ್ ಬೆಂಕಿ ಇಡೋಕ್ಕೂ ಇವರ ಮನೆಯಲ್ಲಿ ಗಂಡ್ ದಿಕ್ಕಿಲ್ಲ..... ಅನ್ನೋ ಮಾತುಗಳು ಬಂದವು ಎಂದು ಹೇಳುತ್ತಾರೆ. ಅಲ್ಲಿಗೆ ಹೆಣ್ಣು ಮಗುವಿನ ಜನನದ ಬಗ್ಗೆ ಸಮಾಜದಿಂದ ಬಂದ ಟೀಕೆಗಳ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿರುವಂತೆ ತೋರಿದೆ.