ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಡಿಸೆಂಬರ್ 26, 2024 ರಂದು ತಮ್ಮ 92ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ದೂರದೃಷ್ಟಿಯ ಮಹಾನ್ ನಾಯಕನ ನಿಧನ ರಾಷ್ಟ್ರದ ಮೇಲೆ ಭಾರೀ ಪ್ರಭಾವ ಬೀರಿದೆ. 2004 ರಿಂದ 2014ರವರೆಗೆ ಸತತ ಎರಡು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಸಿಂಗ್, ದೇಶದ ಬೆಳವಣಿಗೆಯ ಪಥವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ಕಂಡ ಶ್ರೇಷ್ಠ ಆರ್ಥಿಕ ತಜ್ಞನ ನಿಧನಕ್ಕೆ ಜನಸಾಮಾನ್ಯರೂ ಸೇರಿದಂತೆ ರಾಷ್ಟ್ರದಾದ್ಯಂತ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ. ಭಾರತೀಯ ಚಿತ್ರರಂಗ ಕೂಡಾ ಇದರಿಂದ ಹೊರತಲ್ಲ.
ಡಾಲಿ ಧನಂಜಯ್ ಸಂತಾಪ: ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಮನಮೋಹನ್ ಸಿಂಗ್ ಫೋಟೋ ಹಂಚಿಕೊಂಡು, ಕೈಮುಗಿಯುವ ಎಮೋಜಿ ಬಳಸಿ ತಮ್ಮ ಸಂತಾಪ ಸೂಚಿಸಿದ್ದಾರೆ.
ಚಿರಂಜೀವಿ ಪೋಸ್ಟ್: ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರೂ ಕೂಡಾ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಸಿಂಗ್ ಅವರನ್ನು 'ನಮ್ಮ ದೇಶ ನಿರ್ಮಿಸಿದ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು' ಎಂದು ಉಲ್ಲೇಖಿಸಿದ್ದಾರೆ. "ಭಾರತದ 13ನೇ ಪ್ರಧಾನ ಮಂತ್ರಿಯಾಗಿ ಸತತ ಎರಡು ಅವಧಿಗೆ ಅವರ ಅತ್ಯಂತ ಯಶಸ್ವಿ ಅಧಿಕಾರಾವಧಿಯು ಇತಿಹಾಸದಲ್ಲಿ ಉಳಿಯುತ್ತದೆ" ಎಂದು ಬರೆದುಕೊಂಡಿದ್ದಾರೆ. ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಸಂಸದರಾಗಿ ಸೇವೆ ಸಲ್ಲಿಸಿದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಕಂಬನಿ: ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ ಅವರು ಇನ್ಸ್ಟಾ ಸ್ಟೋರಿ ಹಂಚಿಕೊಂಡಿದ್ದಾರೆ. ಮಾಜಿ ಪ್ರಧಾನಿಯ ಫೋಟೋ ಶೇರ್ ಮಾಡಿ, "ಅವರ ನಾಯಕತ್ವ ಮತ್ತು ರಾಷ್ಟ್ರಕ್ಕೆ ಅವರ ಸಮರ್ಪಣೆ ಸದಾ ಸ್ಮರಣೆಯಲ್ಲಿರುತ್ತದೆ. ರೆಸ್ಟ್ ಇನ್ ಪೀಸ್ ಸರ್" ಎಂದು ಬರೆದುಕೊಂಡಿದ್ದಾರೆ.