ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಮೇಲೆ ದುಷ್ಕರ್ಮಿ ಚಾಕುವಿನಿಂದ ದಾಳಿ ಮಾಡಿರುವ ಘಟನೆ ಭಾರತವನ್ನು ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಯಿಂದ 6 ಬಾರಿ ಇರಿತಕ್ಕೆ ಒಳಗಾಗಿರುವ ಪಟೌಡಿ ಕುಟುಂಬಸ್ಥ, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ತನಿಖೆ ಮುಂದುವರಿದಿದೆ.
ಈ ಬಾರಿ ನಟ ಅನಿರೀಕ್ಷಿತ ಪರಿಸ್ಥಿತಿಯಲ್ಲಿ ತಮ್ಮ ನಿವಾಸದಲ್ಲೇ ಗಾಯಗೊಂಡಿದ್ದರೂ, ಅವರಿಗೆ ಗಾಯಗಳು ಹೊಸದೇನಲ್ಲ. 2000ರ ಅವರ ಸಿನಿಮಾ 'ಕ್ಯಾ ಕೆಹ್ನಾ'ದಲ್ಲಿ ಗಾಯಗೊಂಡು 100 ಹೊಲಿಗೆಗಳನ್ನು ಹಾಕಿಸಿಕೊಳ್ಳುವುದರಿಂದ ಹಿಡಿದು ಇತ್ತೀಚೆಗೆ ಬಂದ 'ದೇವರ' ಸಿನಿಮಾ ಸೆಟ್‌ನಲ್ಲಿ ಅಪಘಾತಕ್ಕೀಡಾಗಿದ್ದ ಸಮಯದವರೆಗೂ, ಪಟೌಡಿ ನವಾಬ್ ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡ ಪ್ರಮುಖ 5 ಘಟನೆಗಳು ಇಲ್ಲಿವೆ ನೋಡಿ.
1. ಕ್ಯಾ ಕೆಹ್ನಾ (2000): ಸೈಫ್ ಅಲಿ ಖಾನ್ ಹಾಗೂ ಪ್ರೀತಿ ಜಿಂಟಾ ಅಭಿನಯದ 'ಕ್ಯಾ ಕೆಹ್ನಾ' ಚಿತ್ರದಲ್ಲಿ, ಸೈಫ್ ಕ್ಯಾಸನೋವಾ ಪಾತ್ರವನ್ನು ನಿರ್ವಹಿಸಿದ್ದರು. ಪ್ರೀ ಮ್ಯಾರಿಟಲ್ ಸೆಕ್ಸ್ ಸುತ್ತ ಕಥೆ ಸಾಗಿತ್ತು. ಕೆಲ ಬೈಕ್ ಸ್ಟಂಟ್ ದೃಶ್ಯಗಳನ್ನು ನಾಯಕ ನಟ ಹೊಂದಿದ್ದರು. ಸಾಕಷ್ಟು ಪೂರ್ವಾಭ್ಯಾಸಗಳ ಹೊರತಾಗಿಯೂ, ಮಳೆಗಾಲದ ದಿನದಂದು ಚಿತ್ರೀಕರಿಸುವಾಗ ನಟ ಅಪಘಾತಕ್ಕೀಡಾದರು. ಜಿಗಿಯುವ ದೃಶ್ಯದಲ್ಲಿ ಅವರ ಬೈಕ್ ರ‍್ಯಾಂಪ್‌ನಿಂದ ಜಾರಿತು. ಬಂಡೆಗೆ ಡಿಕ್ಕಿ ಹೊಡೆಯುವ ಮುನ್ನ, ಹಲವು ಅಡಿಗಳಷ್ಟು ಅಂತರದ ಪ್ರಪಾತಕ್ಕೆ ಬಿದ್ದರು. ಅಪಘಾತದಲ್ಲಿ ಸೈಫ್ ಅವರ ತಲೆಗೆ ಗಾಯಗಳಾಗಿತ್ತು. ಪರಿಣಾಮವಾಗಿ, 100 ಹೊಲಿಗೆಗಳನ್ನು ಹಾಕಬೇಕಾಯಿತು.
2. ಏಜೆಂಟ್ ವಿನೋದ್ (2011):ಕರೀನಾ ಕಪೂರ್ ಖಾನ್ ಜೊತೆ ತೆರೆ ಹಂಚಿಕೊಂಡ ಏಜೆಂಟ್ ವಿನೋದ್ ಸಿನಿಮಾ ಸೆಟ್‌ನಲ್ಲಿ ಕೂಡಾ ಗಾಯಕ್ಕೆ ಒಳಗಾಗಿದ್ದರು. ಈ ಚಿತ್ರವನ್ನು ಮೊರಾಕೊ ಮತ್ತು ಪಾಕಿಸ್ತಾನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಭಾರತದಲ್ಲಿ ಹೈ ಆ್ಯಕ್ಷನ್ ಸನ್ನಿವೇಶ ಚಿತ್ರೀಕರಿಸುವಾಗ, ಸೆಟ್‌ನಲ್ಲಾದ ಅಪಘಾತದಲ್ಲಿ ನಟ ಗಾಯಗೊಂಡರು. ಅವರನ್ನು ಆ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ನಟ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.
3. ರಂಗೂನ್ (2017):ರಂಗೂನ್ ಚಿತ್ರದ ಚಿತ್ರೀಕರಣದ ಸಮಯದಲ್ಲೂ ಮತ್ತೊಂದು ಅಪಘಾತವನ್ನು ಎದುರಿಸಿದರು. ವಿಶಾಲ್ ಭಾರದ್ವಾಜ್ ಚಿತ್ರದ ಎರಡನೇ ಮಹಾಯುದ್ಧದ ಸಾಹಸ ದೃಶ್ಯದ ಚಿತ್ರೀಕರಣದ ಸಮಯದಲ್ಲಿ, ಸೈಫ್ ಅವರ ಪಾದಕ್ಕೆ ಗಾಯವಾಗಿತ್ತು. ಅರುಣಾಚಲ ಪ್ರದೇಶದ ಸೇತುವೆ ಮೇಲೆ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಿಸುವಾಗ ಈ ಅಪಘಾತ ಸಂಭವಿಸಿತ್ತು. ಚಿತ್ರೀಕರಣದ ನಂತರ, ಸೈಫ್ ಬ್ಯಾಂಡೇಜ್‌ನೊಂದಿಗೆ ಕಾಣಿಸಿಕೊಂಡಿದ್ದರು. ಈ ಮೂಲಕ, ಕಂಗನಾ ರಣಾವತ್ ಮತ್ತು ಶಾಹಿದ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರಂಗೂನ್ ಚಿತ್ರದ ಸೆಟ್‌ನಲ್ಲಿ ಸೈಫ್ ಗಾಯಗೊಂಡಿದ್ದಾರೆ ಎಂಬುದನ್ನು ದೃಢಪಡಿಸಲಾಯಿತು.