ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್ಡಮ್ ಹೊಂದಿರುವ ನಟ ವಿಜಯ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ದಳಪತಿ 69'. ತಾತ್ಕಾಲಿಕ ಶೀರ್ಷಿಕೆಯ ಸಿನಿಮಾ ಸುತ್ತಲಿನ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿವೆ. ಈ ಪ್ರಾಜೆಕ್ಟ್ ಹಿಂದಿರುವ ಬ್ಯಾನರ್ 'ಕೆವಿಎನ್' ಸಿನಿಮಾ ನಟರ ಹೆಸರನ್ನು ಬಹಿರಂಗಪಡಿಸಲು ಶುರುಹಚ್ಚಿಕೊಂಡಿದೆ. ಇದೀಗ ಮೊದಲ ಹೆಸರು ರಿವೀಲ್ ಆಗಿದ್ದು, ಈ ಪ್ರಾಜೆಕ್ಟ್ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ದ್ವಿಗುಣಗೊಂಡಿದೆ. ಬಾಲಿವುಡ್ ಸೂಪರ್ ಸ್ಟಾರ್ ಬಾಬಿ ಡಿಯೋಲ್ ಸೌತ್ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.
ಈ ವಾರಾಂತ್ಯ ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಅದಕ್ಕೂ ಮೊದಲು, ನಿರ್ಮಾಪಕರು ಪಾತ್ರವರ್ಗವನ್ನು ಅಧಿಕೃತವಾಗಿ ಪ್ರೇಕ್ಷಕರಿಗೆ ಪರಿಚಯಿಸುತ್ತಿದ್ದಾರೆ. ಸಿನಿಮಾದ ಎಲ್ಲಾ ನಟ, ನಟಿಯರನ್ನು ಒಮ್ಮೆಲೆ ಪರಿಚಯಿಸುವ ಬದಲು ಒಬ್ಬೊಬ್ಬರಂತೆ ನಟರ ಹೆಸರನ್ನು ಅನೌನ್ಸ್ ಮಾಡಲು ನಿರ್ಧರಿಸಿದ್ದು, ಇದೀಗ ಬಾಲಿವುಡ್ ನಟ ಬಾಬಿ ಡಿಯೋಲ್ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ.
ಬಾಬಿ ಡಿಯೋಲ್ ಪೋಸ್ಟರ್ ಅನಾವರಣಗೊಳಿಸಿದ ಕೆವಿಎನ್ ಪ್ರೊಡಕ್ಷನ್, 'ಇದೀಗ 100 ಪರ್ಸೆಂಟ್ ಅಫೀಶಿಯಲ್, ಬಾಬಿ ಡಿಯೋಲ್ ದಳಪತಿ 69 ತಂಡಕ್ಕೆ ಸೇರಿದ್ದಾರೆ ಎಂಬುದನ್ನು ಘೋಷಿಸಲು ಬಹಳ ಸಂತೋಷವಾಗಿದೆ' ಎಂದು ಬರೆದುಕೊಂಡಿದೆ.
ಅಧಿಕೃತ ಘೋಷಣೆಗೂ ಮುನ್ನ, ಬಾಬಿ ಡಿಯೋಲ್ ಖಳನಾಯಕನ ಪಾತ್ರ ನಿರ್ವಹಿಸಬಹುದೆಂಬ ಊಹಾಪೋಹಗಳೆದ್ದಿದ್ದವು. ಬಾಬಿ ಡಿಯೋಲ್ ಎಂಟ್ರಿ ಬಗ್ಗೆ ಸಿನಿಮಾ ಇಂಡಸ್ಟ್ರಿ ಮೂಲಗಳು ಬಹುತೇಕ ಖಚಿತಪಡಿಸಿದ್ದವು. ಈ ವದಂತಿ ಇದೀಗ ನಿಜವಾಗಿದೆ. ದಳಪತಿ 69 ಬಾಲಿವುಡ್ ನಟನ ಎರಡನೇ ತಮಿಳು ಚಿತ್ರ. ಈಗಾಗಲೇ ಸೂಪರ್ ಸ್ಟಾರ್ ಸೂರ್ಯ ಅವರ ಕಂಗುವ ಸಿನಿಮಾದಲ್ಲಿ ಪ್ರಮುಖ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.