ಬೆಂಗಳೂರು: ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಅಕಾಲಿದಳದ ಮುಖಂಡ ಮುಖಂಡ, ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಅವರು 'ಕಂಗನಾ ಅವರಿಗೆ ಅತ್ಯಾಚಾರದ ಅನುಭವ ಇದೆ' ಎಂಬ ತುಚ್ಛ ಮತ್ತು ಅತ್ಯಂತ ನಿಷ್ಕೃಷ್ಟ ಹೇಳಿಕೆ ನೀಡಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸಿ ಮಂಜುಳಾ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಂಜುಳಾ, ಸಂಸದೆ ಮತ್ತು ಮಹಿಳೆಯನ್ನು ಅವಮಾನಿಸಿದ ಇವರ ನಿಷ್ಕೃಷ್ಟ ಮನಸ್ಥಿತಿಯನ್ನು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ-ಹತ್ಯೆ ಪ್ರಕರಣ ಇಡೀ ದೇಶದಾದ್ಯಂತ ಆಕ್ರೋಶ ನಿರ್ಮಾಣ ಮಾಡಿರುವ ಈ ಸಂದರ್ಭದಲ್ಲಿ ಅವರು ಈ ಹೇಳಿಕೆ ಕೊಟ್ಟಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಗಳ ಸೂಕ್ಷ್ಮ ಪರಿಸ್ಥಿತಿಯನ್ನು ಗ್ರಹಿಸದೇ ಈ ಒಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದು ದುಶ್ಯಾಸನ ಮತ್ತು ದುರ್ಯೋಧನರ ಇತಿಹಾಸವನ್ನು ನೆನಪಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಪಂಜಾಬ್‌ನ ಮಾಜಿ ಸಂಸದರು ಹಾಗೂ ಶಿರೋಮಣಿ ಅಕಾಲಿದಳದ (ಅಮೃತಸರ) ಮುಖ್ಯಸ್ಥ ಸಿಮ್ರಂಜಿತ್ ಸಿಂಗ್ ಮಾನ್ ಅವರು ಕಂಗನಾ ಬಗ್ಗೆ ಮಾತನಾಡುವಾಗ "ಅತ್ಯಾಚಾರದ ಸಾಕಷ್ಟು ಅನುಭವವಿದೆ" ಎಂದು ಹೇಳಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.