ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರ ಗ್ರ್ಯಾಂಡ್ ಫಿನಾಲೆ ಭಾನುವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು. ಕಾರ್ತಿಕ್ ಮಹೇಶ್ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಆಗಮಿಸಿದ ದಿನದಿಂದಲೂ ಉತ್ತಮವಾಗಿ ಆಟವಾಡಿಕೊಂಡು ಬಂದಿದ್ದ ಕಾರ್ತಿಕ್ ಫಿನಾಲೆಯಲ್ಲಿ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಜೊತೆ ಪೈಪೋಟಿಯಲ್ಲಿ ಗೆದ್ದು, ಟ್ರೋಫಿ ಜಯಿಸಿದರು. ಫಿನಾಲೆ ಅಖಾಡದಲ್ಲಿದ್ದ ಡ್ರೋನ್ ಪ್ರತಾಪ್ ಫಸ್ಟ್ ರನ್ನರ್ ಅಪ್ ಆಗಿದ್ದು, ಸಂಗೀತ ಶೃಂಗೇರಿ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಸೀಸನ್ ಹತ್ತರ ವಿನ್ನರ್ ಕಾರ್ತಿಕ್ ಅವರಿಗೆ 50 ಲಕ್ಷ ರೂ. ಕ್ಯಾಶ್ ಪ್ರೈಸ್, ಮಾರುತಿ ಸುಜುಕಿ ಬ್ರೇಜಾ ಕಾರು ಹಾಗೂ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಬಹುಮಾನವಾಗಿ ದೊರಕಿದೆ. ಫಸ್ಟ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರಿಗೆ 10 ಲಕ್ಷ ರೂ ನಗದು ಹಾಗೂ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಬಹುಮಾನವಾಗಿ ನೀಡಲಾಗಿದೆ. ಎರಡನೇ ರನ್ನರ್ ಅಪ್ ಸ್ಥಾನ ಪಡೆದ ಸಂಗೀತಾ ಶೃಂಗೇರಿ ಅವರಿಗೆ 7 ಲಕ್ಷ ರೂ. ಬಹುಮಾನ ನೀಡಲಾಗಿದೆ. ಈವರೆಗಿನ ಬಿಗ್ ಬಾಸ್ ಸೀಸನ್ಗಳಲ್ಲಿ ವಿನ್ನರ್ಗೆ ಮಾತ್ರ ನಗದು ಬಹುಮಾನ ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಫಿನಾಲೆಗೆ ಬಂದಿರುವ ಐವರು ಕಂಟೆಸ್ಟೆಂಟ್ಗಳಿಗೂ ಕ್ಯಾಶ್ ಪ್ರೈಸ್ ನೀಡಲಾಗಿದೆ.
ಬಿಗ್ ಬಾಸ್ ಮನೆಯೊಳಗೆ ಈ ಬಾರಿ ಒಟ್ಟು 21 ಸ್ಪರ್ಧಿಗಳು ಕಾಲಿಟ್ಟಿದ್ದರು. ಆಟ ಪ್ರಾರಂಭವಾದ ಮೊದಲ ವಾರದಿಂದಲೇ ಒಬ್ಬೊಬ್ಬರಾಗಿ ಮನೆಯಿಂದ ಹೊರ ನಡೆದು, ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಮತ್ತೆ ಮನೆಯೊಳಗೆ ಪ್ರವೇಶಿಸಿ, ಒಟ್ಟು 112 ದಿನಗಳು ಅಂದರೆ 16 ವಾರಗಳ ಕಾಲ ಬಿಗ್ ಬಾಸ್ ಆಟ ನಡೆದಿದೆ. ಈ 112 ದಿನಗಳ ಜಿದ್ದಾಜಿದ್ದಿನಲ್ಲಿ ಫಿನಾಲೆ ಅಂಗಳಕ್ಕೆ ಆರು ಮಂದಿ ಸ್ಪರ್ಧಿಗಳು ಆಯ್ಕೆಯಾಗಿದ್ದರು. ತುಕಾಲಿ ಸಂತೋಷ್, ವರ್ತೂರು ಸಂತೋಷ್, ವಿನಯ್ ಗೌಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಮಹೇಶ್ ಇದ್ದರು. ಇವರಲ್ಲಿ ಇಬ್ಬರು ಶನಿವಾರವೇ ಮನೆಯಿಂದ ಹೊರ ನಡೆದಿದ್ದರು. 5ನೇ ರನ್ನರ್ ಅಪ್ ಆಗಿ ತುಕಾಲಿ ಸಂತೋಷ್ ಅವರು ಮನೆಯಿಂದ ಹೊರ ನಡೆದಿದ್ದು, ಅವರಿಗೆ ಕಿಚ್ಚ ಸುದೀಪ್ ವೇದಿಕೆ ಮೇಲೆ 2 ಲಕ್ಷ ರೂಪಾಯಿಯ ಚೆಕ್ ನೀಡಿದರು. ನಾಲ್ಕನೇ ರನ್ನರ್ ಅಪ್ ಆಗಿ ವರ್ತೂರು ಸಂತೋಷ್ ಮನೆಯಿಂದ ಹೊರ ನಡೆದಿದ್ದು, ಅವರಿಗೆ 2 ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಲಾಗಿದೆ.