ಕರುನಾಡಿನ ಅತ್ಯಂತ ಜನಪ್ರಿಯ ಶೋ 'ಬಿಗ್ ಬಾಸ್' ಸೀಸನ್ 11ರ ಟ್ರೋಫಿಯನ್ನು ಹನುಮಂತು ಗೆದ್ದುಕೊಂಡಿದ್ದಾರೆ. ಕಳೆದ ರಾತ್ರಿ ಪ್ರಸಾರ ಕಂಡ ಗ್ರ್ಯಾಂಡ್ ಫಿನಾಲೆಯಲ್ಲಿ 'ಬಿಗ್ ಬಾಸ್' ಸೀಸನ್ 11ರ ಟ್ರೋಫಿಯನ್ನು ಹಳ್ಳಿ ಹೈದ ಸ್ವೀಕರಿಸಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ನಗದು ಬಹುಮಾನ: ಬಿಗ್ ಬಾಸ್ ವಿಜೇತರಾಗಿ ಹೊರಹೊಮ್ಮಿರುವ ಹನುಮಂತು ಅವರಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ಕಾನ್ಫಿಡೆಂಟ್ ಗ್ರೂಪ್ ಕಡೆಯಿಂದ ಡಾ.ರಾಯ್ ಅವರು ಬಹುಮಾನದ ಚೆಕ್ ವಿತರಿಸಿದರು. ಅಲ್ಲದೇ ಸ್ಪಾನ್ಸರ್ಸ್ ಕಡೆಯಿಂದಲೂ ಬಹುಮಾನಗಳು ಲಭಿಸಿವೆ ಎಂಬ ಮಾಹಿತಿ ಇದೆ.
ಕನ್ನಡಿಗರಿಂದ ಸ್ವೀಕರಿಸಿದ ಮತಗಳೆಷ್ಟು?ಬಿಗ್ ಬಾಸ್ ಸೀಸನ್ 11ರ ವಿಜೇತ ಬರೋಬ್ಬರಿ 5,23,89,318 ಮತಗಳನ್ನು ಪಡೆದುಕೊಂಡು ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ 10 ಸೀಸನ್ಗಳಲ್ಲಿ ಯಾರಿಗೂ ಈ ಮಟ್ಟಿಗೆ ವೋಟ್ಸ್ ಬಿದ್ದಿರಲಿಲ್ಲ ಅನ್ನೋದು ಗಮನಾರ್ಹ ಸಂಗತಿ. ಕಳೆದ ಸೀಸನ್ ಅತ್ಯಂತ ಯಶಸ್ವಿ ಸೀಸನ್ ಎಂದು ಹೇಳಲಾಗಿತ್ತು. ಆದ್ರೆ ಸೀಸನ್ 11 ಈ ಹಿಂದಿನ ಎಲ್ಲಾ 10 ಸೀಸನ್ಗಳ ಜನಪ್ರಿಯತೆಯನ್ನು ಮೀರಿಸಿದೆ. ಕಳೆದ ಸೀಸನ್ ವಿನ್ನರ್ ಸರಿಸುಮಾರು 2 ಕೋಟಿ ಮತಗಳನ್ನು ಪಡೆದುಕೊಂಡಿದ್ದರು. ಆದ್ರೆ ಈ ಸೀಸನ್ನ ರನ್ನರ್ ಅಪ್ 2 ಕೋಟಿಗೂ ಹೆಚ್ಚು ಮತಗಳನ್ನು ಸ್ವೀಕರಿಸಿದ್ದಾರೆ. ಹನುಮಂತು 5.23 ಕೋಟಿಗೂ ಹೆಚ್ಚು ಮತಗಳನ್ನು ಸ್ವೀಕರಿಸಿದ ಮೊದಲ ಸ್ಪರ್ಧಿಯಾಗಿದ್ದು, ಈ ಅಂಕಿ ಅಂಶಗಳು ಸುದೀಪ್ ಸಾರಥ್ಯದಲ್ಲಿ ಬರುವ ಕಾರ್ಯಕ್ರಮ ಜನಪ್ರಿಯತೆಯ ಚಿತ್ರಣ ಒದಗಿಸಿದೆ.
ಹನುಮಂತು ಮದುವೆಗೆ ಒಪ್ಪಿಗೆ: ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ನಿರೂಪಕ ಸುದೀಪ್ ಅವರು ಹನುಮಂತು ಅವರ ಮದುವೆ ವಿಚಾರ ಪ್ರಸ್ತಾಪಿಸಿದರು. ಹನುಮಂತು ಪೋಷಕರ ಬಳಿ ಕಿಚ್ಚ ಮಾತನಾಡಿ, ವೇದಿಕೆಯಲ್ಲೇ ಒಪ್ಪಿಗೆ ಸಿಗುವಂತೆ ಮಾಡಿದ್ರು. ಪೋಷಕರು ಒಪ್ಪಿದ ಕೂಡಲೇ, ಮಾತು ತಪ್ಪಬಾರದು, ಊಟಕ್ಕೆ ಹುಡುಕಂಡ್ ಬರ್ತೀವಿ ಎಂದು ಸಹ ಕಿಚ್ಚ ಹಾಸ್ಯ ಚಟಾಕಿ ಹಾರಿಸಿದರು. ಹನುಮಂತು ಅವರು ಮದುವೆಗೆ ಓರ್ವ ಹುಡುಗಿಯನ್ನು ನೋಡಿರೋದು ನಿಮಗೆ ತಿಳಿದಿರೋ ವಿಚಾರವೇ. ಬಿಗ್ ಬಾಸ್ ಗೆದ್ದರೆ ನಾನು ನನ್ನ ಅತ್ತೆ ಮನೆ ಮುಂದೆ ಹೋಗುತ್ತೇನೆ ಎಂದು ಬಿಗ್ ಬಾಸ್ ಮನೆಯಲ್ಲಿರುವಾಗ ಹನುಮಂತು ತಿಳಿಸಿದ್ದರು.
ಬಿಗ್ ಬಾಸ್ ಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿ:ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ಗೆ ಎಂಟ್ರಿ ಕೊಡೋ ಸ್ಪರ್ಧಿಗಳು ಫಿನಾಲೆ ತಲುಪೋದೇ ಸಾಧನೆ ಎಂಬ ಮಾತಿದೆ. ಆದ್ರೆ ಈ ಸೀಸನ್ನ ಟಾಪ್ 3 ಕಂಟಸ್ಟೆಂಟ್ಗಳಲ್ಲಿ ಇದ್ದ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳೇ. ತಮ್ಮ ಅಮೋಘ ಪ್ರದರ್ಶನದಿಂದ ಹನುಮಂತು ಮತ್ತು ರಜತ್ ಕಿಶನ್ ಜನರ ಹೃದಯ ಗೆದ್ದಿದ್ದಾರೆ. ಹನುಮಂತು ಟ್ರೋಪಿ ಎತ್ತಿ ಹಿಡಿದು, ದಾಖಲೆ ಬರೆದಿದ್ದಾರೆ.