'ಬಿಗ್ ಬಾಸ್', ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಪ್ರೇಕ್ಷಕರನ್ನು ಸಂಪಾದಿಸಿರುವ ನಂಬರ್ ಒನ್ ಕಾರ್ಯಕ್ರಮ ಅಂದ್ರೆ ಅತಿಶಯೋಕ್ತಿಯಲ್ಲ. ಬಾಲಿವುಡ್ನಲ್ಲಿ ಮೊದಲು ಆರಂಭವಾದ ಈ ಕಾರ್ಯಕ್ರಮ ಸದ್ಯ ಬಹುತೇಕ ಎಲ್ಲಾ ಭಾಷೆಗಳಲ್ಲೂ ಪ್ರಸಾರವಾಗುತ್ತಿದೆ. ಅದರಂತೆ ಕಳೆದ ಭಾನುವಾರ ಕನ್ನಡ ಬಿಗ್ ಬಾಸ್ ಬಹಳ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಆದರೆ, ಊಹೆಗೂ ಮೀರಿ ಮೊದಲ ವಾರದಲ್ಲೇ ವಾದ ವಿವಾದಗಳು ದೊಡ್ಡ ಮಟ್ಟದಲ್ಲಿ ನಡೆದಿದೆ. ಇಂದಿನ ಸಂಚಿಕೆ ಇನ್ನೂ ಗಂಭೀರವಾಗಿರಲಿದೆ ಎಂಬ ಸುಳಿವನ್ನು ಪ್ರೋಮೋ ಬಿಟ್ಟುಕೊಟ್ಟಿದೆ.
ಕಲರ್ಸ್ ಕನ್ನಡ ಇಂದು ತನ್ನ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪ್ರೋಮೋ ಅನಾವರಣಗೊಳಿಸಿದೆ. ''ಏನೋ ಮಾಡಲು ಹೋಗಿ, ಇನ್ನೇನೋ ಮಾಡಿದ್ರಾ ಮನೆ ಸದಸ್ಯರು. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ 9:30ಕ್ಕೆ'' ಎಂದು ಬರೆದುಕೊಂಡಿದೆ.
ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಆಟದ ಭರದಲ್ಲಿ ಕೆಲ ಸ್ಪರ್ಧಿಗಳು ಅತಿ ಆವೇಶದಲ್ಲಿ ಆಡಿರುವಂತೆ ತೋರಿದೆ. ಪ್ರೋಮೋ ಹಿನ್ನೆಲೆಯಲ್ಲಿ, ''ಆಟದ ಉದ್ದೇಶ ಇರುವುದು ಚೆಂಡನ್ನು ರಕ್ಷಿಸಿಕೊಳ್ಳಬೇಕೆಂದು. ಗೆಲುವನ್ನು ಸಾಧಿಸುವ ಛಲದಲ್ಲಿ ಉದ್ದೇಶ ಮರೆಯುವುದು ಮೃಗೀಯ ಪ್ರೌವೃತ್ತಿ ಎಂದು ಹೇಳಬಹುದು. ಈ ಪ್ರವೃತ್ತಿಯನ್ನು ಹತೋಟಿಯಲ್ಲಿದ್ದುಕೊಂಡು ಆಡಿ ಗೆದ್ದಾಗಲೇ ಮನುಷ್ಯರು ಎಂದನಿಸಿಕೊಳ್ಳೋದು'' ಎಂದು ಬಿಗ್ ಬಾಸ್ ಹೇಳುತ್ತಿರುವುದನ್ನು ಕಾಣಬಹುದು.
ವಿಡಿಯೋದಲ್ಲಿ, ಗುದ್ದಾಟವನ್ನು ತೋರಿಸಲಾಗಿದೆ. ಸ್ಪರ್ಧಿಗಳ ಎಳೆದಾಟ, ನೆಲಕ್ಕೆ ಕುಕ್ಕರಿಸಿರುವುದು ಹೀಗೆ ಗಂಭೀರ ಸನ್ನಿವೇಶವನ್ನು ಕಾಣಬಹುದು. ಅಲ್ಲದೇ ಸ್ಪರ್ಧಿ ಶಿಶಿರ್ ಪ್ರಜ್ಞೆ ತಪ್ಪಿ ಬೀಳುವ ದೃಶ್ಯವನ್ನೂ ತೋರಿಸಲಾಗಿದೆ.