ಶೀರ್ಷಿಕೆ ಮತ್ತು ನಾಯಕ ನಟನಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ 'ಮ್ಯಾಕ್ಸ್'. 'ವಿಕ್ರಾಂತ್ ರೋಣ' ಆದ್ಮೇಲೆ ಅಭಿನಯ ಚಕ್ರವರ್ತಿ ಅಭಿನಯಿಸುತ್ತಿರುವ ಬಹು ನಿರೀಕ್ಷೆಯ ಸಿನಿಮಾ. ಹೀಗಾಗಿ, ಕಿಚ್ಚನ ಅಭಿಮಾನಿ ಬಳಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಶೀಘ್ರದಲ್ಲೇ ಸಿನಿಪ್ರಿಯರಿಗೆ ಚಿತ್ರತಂಡ ಒಂದು ಅಪ್ಡೇಟ್ ಕೊಡಲಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಿಚ್ಚನ 'ಮ್ಯಾಕ್ಸ್' ಸಿನಿಮಾ ಈಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ ಈ ಚಿತ್ರದ ಗ್ರಾಫಿಕ್ಸ್, ವಿಎಫ್ಎಕ್ಸ್ ಕೆಲಸ ಮುಗಿಯದ ಕಾರಣ ಬಿಡುಗಡೆ ವಿಳಂಬ ಎದುರಿಸುತ್ತಿದೆ. ಇನ್ನೇನು 2024ನೇ ಸಾಲು ಅಂತಿಮ ಘಟ್ಟ ತಲುಪಿದೆ. ಅದ್ಯಾವಾಗ ಮ್ಯಾಕ್ಸ್ ಬಿಡುಗಡೆ ಆಗಲಿದೆ ಎಂದು ಸುದೀಪ್ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ, ನವೆಂಬರ್ 27ಕ್ಕೆ 'ಮ್ಯಾಕ್ಸ್'ನಿಂದ ಬಿಗ್ ಅನೌನ್ಸ್ಮೆಂಟ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಅದಕ್ಕೆ ಪೂರಕವಾಗಿ ಒಂದು ಪೋಸ್ಟರ್ ಕೂಡಾ ಅನಾವರಣಗೊಂಡಿದ್ದು, ಎಲ್ಲೆಡೆ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.
ಜುಲೈ ಕೊನೆಗೆ ಅನಾವರಣಗೊಂಡ ಟೀಸರ್ ನೋಡಿದ್ರೆ ಇದೊಂದು ಪಕ್ಕಾ ಮಾಸ್ ಆ್ಯಕ್ಷನ್ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಅಭಿನಯ ಚಕ್ರವರ್ತಿ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಆದ್ರೆ ಕಿಚ್ಚ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿರೋದು ಈ ಚಿತ್ರದ ಹೈಲೆಟ್ ಅಂತಲೇ ಹೇಳಬಹುದು.
ಚಿತ್ರದಲ್ಲಿ ಸುದೀಪ್ ಭರ್ಜರಿ ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಸುಳಿವನ್ನು ಈಗಾಗಲೇ ಟೀಸರ್ ಬಿಟ್ಟುಕೊಟ್ಟಿದೆ. ಆ್ಯಕ್ಷನ್ ದೃಶ್ಯಗಳು ಮೈಜುಂ ಎನಿಸುವಂತಿದ್ದು, ಅಭಿಮಾನಿಗಳ ಕಣ್ಮನ ಸೆಳೆದಿದೆ. ಟೀಸರ್‌ನ ಕೊನೆಯಲ್ಲಿ ಬರುವ ಸುದೀಪ್ ಡ್ಯಾನ್ಸ್ ದೃಶ್ಯ ಥಿಯೇಟರ್‌ನಲ್ಲಿ ಫ್ಯಾನ್ಸ್‌ಗೆ ಭರ್ಜರಿ ಟ್ರೀಟ್ ಆಗೋದೊಂತು ಪಕ್ಕಾ. ಟೀಸರ್ ಅಲ್ಲದೇ ಮ್ಯಾಕ್ಸಿಮಮ್ ಅನ್ನೋ ಸಾಂಗ್ ಕೂಡಾ ಬಿಡುಗಡೆ ಆಗಿದೆ.