'ಭೈರತಿ ರಣಗಲ್', ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. 'ಘೋಸ್ಟ್' ಚಿತ್ರದ ಯಶಸ್ಸಿನ ಬಳಿಕ ಹ್ಯಾಟ್ರಿಕ್ ಹೀರೋ 'ಭೈರತಿ ರಣಗಲ್' ಆಗಿ ಕಾಣಿಸಿಕೊಂಡಿರುವ ಹೈವೋಲ್ಟೇಜ್ ಚಿತ್ರ. ಮೇಕಿಂಗ್ ಜೊತೆಗೆ ಟೀಸರ್, ಟ್ರೇಲರ್ ಮೂಲಕ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿಸಿರುವ ಕರುನಾಡ ಚಕ್ರವರ್ತಿ ಮುಖ್ಯಭೂಮಿಕೆಯ 'ಭೈರತಿ ರಣಗಲ್' ಬಿಡುಗಡೆ ಹೊಸ್ತಿಲಿನಲ್ಲಿದೆ. ಟ್ರೇಲರ್ನಿಂದಲೇ ಸಾಕಷ್ಟು ಸದ್ದು ಮಾಡಿರುವ ಈ ಚಿತ್ರದ ಪ್ರೀ ರಿಲೀಸ್ ಈವೆಂಟ್ ಹೊಸಕೆರೆಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ಜರುಗಿತು.
ಒಂದು ಇಂಟ್ರೆಸ್ಟಿಂಗ್ ವಿಷ್ಯ ಏನಂದ್ರೆ 1996ರಲ್ಲಿ ಶಿವರಾಜ್ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ 'ಜನುಮದ ಜೋಡಿ' ಕೂಡಾ ನವೆಂಬರ್ 15 ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತು. ಇದೀಗ ಭೈರತಿ ರಣಗಲ್ ಚಿತ್ರ ಕೂಡ ಅದೇ ದಿನ ಅದೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವುದು ವಿಶೇಷ.
ಭೈರತಿ ರಣಗಲ್ ಪ್ರೀ ರಿಲೀಸ್ ಈವೆಂಟ್ನಲ್ಲಿ ಡಾಲಿ ಧನಂಜಯ್, ನೀನಾಸಂ ಸತೀಶ್, ವಿಜಯ ರಾಘವೇಂದ್ರ, ಸುಧಾರಾಣಿ, ಶೃತಿ, ರಕ್ಷಿತಾ ಪ್ರೇಮ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್, ಮಾಜಿ ಅಧ್ಯಕ್ಷ ಸಾ. ರಾ ಗೋವಿಂದು, ನಿರ್ಮಾಪಕ ಸೂರಪ್ಪ ಬಾಬು, ಕೆ.ಪಿ. ಶ್ರೀಕಾಂತ್, ನಿರ್ದೇಶಕ ಬಹದ್ದೂರ್ ಚೇತನ್, ಪವನ್ ಒಡೆಯರ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಕಾಣಿಸಿಕೊಂಡರು. ತಮ್ಮ ಪ್ರೀತಿಪೂರ್ವಕ ಮಾತುಗಳಿಂದ ಭೈರತಿ ರಣಗಲ್ ದೊಡ್ಡ ಮಟ್ಟದ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ನಟ ಶಿವರಾಜ್ಕುಮಾರ್, ''ಮಫ್ತಿ ಚಿತ್ರದ ಭೈರತಿ ರಣಗಲ್ ಪಾತ್ರವನ್ನು ನೀವು ಮೆಚ್ಚಿ ಯಶಸ್ವಿಗೊಳಿಸಿದ್ದೀರಿ. ಮಫ್ತಿಯ ಪ್ರೀಕ್ವೆಲ್ ಈ ಭೈರತಿ ರಣಗಲ್. ನಿರ್ದೇಶಕ ನರ್ತನ್ ತುಂಬಾ ಒಳ್ಳೆಯ ಕಥೆ ಮಾಡಿಕೊಂಡಿದ್ದರು. ಅಷ್ಟೇ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಭೈರತಿ ರಣಗಲ್ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗುತ್ತಾನೆ. ನಮ್ಮ ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ ಎರಡನೇ ಚಿತ್ರವಿದು. ಅನುಭವಿ ತಂತ್ರಜ್ಞರ ಹಾಗೂ ಕಲಾವಿದರ ಸಮಾಗಮದಲ್ಲಿ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. 28 ವರ್ಷಗಳ ಹಿಂದೆ ನವೆಂಬರ್ 15ರಂದೇ ನನ್ನ ಜನುಮದ ಜೋಡಿ ಚಿತ್ರ ನರ್ತಕಿ ಥಿಯೇಟರ್ನಲ್ಲಿ ಬಿಡುಗಡೆಯಾಗಿತ್ತು. ಸಿನಿಮಾಗೆ ನಾಗಾಭರಣ ಆ್ಯಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಕೂಡಾ ನವೆಂಬರ್ 15ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗುತ್ತಿದೆ. ಆ ಚಿತ್ರದ ನಿರ್ಮಾಪಕರು ನನ್ನ ಅಮ್ಮ. ಈ ಚಿತ್ರದ ನಿರ್ಮಾಪಕರು ನನ್ನ ಹೆಂಡತಿ'' ಎಂದು ತಿಳಿಸಿದರು.