ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಅದಿತಿ ಪ್ರಭುದೇವ ಯುಗಾದಿಯಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ನಟಿಗೆ ಹೆಣ್ಣು ಮಗು ಜನಿಸಿದ್ದು, ಯುಗಾದಿಯ ಈ ವಿಶೇಷ ದಿನದಂದು ಸೋಷಿಯಲ್ ಮೀಡಿಯಾಗಳಲ್ಲಿ ಶುಭಸುದ್ದಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ನೆಟ್ಟಿಗರು ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಗ್ಲ್ಯಾಮರ್ ಜೊತೆಗೆ ಉತ್ತಮ ಅಭಿನಯದಿಂದ ಗುರುತಿಸಿಕೊಂಡಿರುವ ಅದಿತಿ ಪ್ರಭುದೇವ, ಹೊಸ ವರ್ಷದಂದು ತಾಯಿ ಆಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು. ಯುಗಾದಿ ಕೂಡ ಹಿಂದೂಗಳ ಪಾಲಿಗೆ ಹೊಸ ವರ್ಷವೇ. ಇಂದು, ತಾವು ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ತಿಳಿಸಿದ್ದಾರೆ.
"ನಾನು ಐದು ತಿಂಗಳ ಗರ್ಭಿಣಿ. ಈ ವರ್ಷ ಅಮ್ಮ ಆಗುತ್ತೀನಿ" ಈ ವರ್ಷಾರಂಭ ಸೋಷಿಯಲ್ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದರು. ಕಲರ್ಫುಲ್ ಬೇಬಿ ಬಂಪ್ ಫೋಟೋಶೂಟ್ ಮೂಲಕ ಹೊಸ ವರ್ಷದಂದು ಸಿಹಿ ಸುದ್ದಿ ಹಂಚಿಕೊಂಡಿದ್ದರು. ಅದಾದ ಬಳಿಕವೂ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ಫೋಟೋಶೂಟ್ಗಳ ಮೂಲಕ ಗಮನ ಸೆಳೆದಿದ್ದಾರೆ.
ಫೆಬ್ರವರಿ ಮಧ್ಯದಲ್ಲಿ ಸೀಮಂತ ಶಾಸ್ತ್ರದ ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಅದಾದ ನಂತರ ತುಂಬು ಗರ್ಭಿಣಿಯ ಫೋಟೋಶೂಟ್ ಮಾಡಿಸಿ, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ಗೆ 'ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ' ಎಂಬ ಕ್ಯಾಪ್ಶನ್ ಕೊಟ್ಟಿದ್ದರು. ಚೊಚ್ಚಲ ಹೆರಿಗೆ ಒಳ್ಳೆಯದಾಗಲಿ ಎಂಬರ್ಥದಲ್ಲಿ ಕಾಮೆಂಟ್ಗಳು ಹರಿದು ಬಂದಿದ್ದವು. ಫೈನಲಿ ಹೆರಿಗೆ ಯಾವುದೇ ತೊಂದರೆಗಳಿಲ್ಲದಂತೆ ನಡೆದಿದ್ದು, ಯುಗಾದಿಯ ವಿಶೇಷ ದಿನದಂದು ಶುಭಸುದ್ದಿ ಹಂಚಿಕೊಂಡಿದ್ದಾರೆ.