ಸ್ಯಾಂಡಲ್ವುಡ್ನಲ್ಲಿ 'ಭೀಮ' ಹಾಗೂ 'ಕೃಷ್ಣಂ ಪ್ರಣಯ ಸಖಿ' ಸಿನಿಮಾಗಳ ಸಕ್ಸಸ್ ಬೆನ್ನಲ್ಲೇ ಬಹುನಿರೀಕ್ಷಿತ 'ಪೌಡರ್' ಚಿತ್ರ ಇಂದು ರಾಜ್ಯಾದ್ಯಂತ ತೆರೆಗಪ್ಪಳಿಸಿದೆ. ವಿಭಿನ್ನ ಕಥಾಹಂದರದ ಮೂಲಕ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದ 'ಪೌಡರ್' ಕರುನಾಡಿನ 125ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಬಹುತೇಕ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ.
ಕನ್ನಡ ಚಿತ್ರರಂಗದ ನವರಸನಾಯಕ ಜಗ್ಗೇಶ್, ಪಾತ್ರಧಾರಿಗಳ ಪರಿಚಯ ಮಾಡಿಕೊಡುವ ಮೂಲಕ ಶುರುವಾಗುವ 'ಪೌಡರ್' ಕಂಪ್ಲೀಟ್ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ. ದಿಗಂತ್ ಸೂಪರ್ ಮಾರ್ಕೆಟ್ನಲ್ಲಿ ಕೆಲಸ ಮಾಡುವ ಯುವಕ ಸೂರ್ಯನ ಪಾತ್ರ ನಿರ್ವಹಿಸಿದ್ದಾರೆ. ತಾನು ಪ್ರೀತಿಸೋ ಹುಡುಗಿಯನ್ನು ಇಂಪ್ರೆಸ್ ಮಾಡೋದೇ ಅವನ ಕಾಯಕ. ದಿಗಂತ್ ಪ್ರೇಮಿಯಾಗಿ ಧನ್ಯಾ ರಾಮ್ಕುಮಾರ್ ನಟಿಸಿದ್ದು, ನಿತ್ಯಾ ಎಂಬ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಣದ ಮೇಲಿನ ವ್ಯಾಮೋಹ ಕೊಂಚ ಹೆಚ್ಚೇ. ಇನ್ನೂ ಲವ್ ಮಾಡಲು ವಿಚಿತ್ರ ಐಡಿಯಾ ಕೊಡುವ ದಿಗಂತ್ ಸ್ನೇಹಿತನ ಪಾತ್ರದಲ್ಲಿ ಅನಿರುದ್ಧ್ ಆಚಾರ್ಯ ಕಾಣಿಸಿಕೊಂಡಿದ್ದಾರೆ. ಈ ಮೂವರು ಪೌಡರ್ ಹೆಸರಿನ ಡ್ರಗ್ಸ್ ಮಾರಿ ದಿಢೀರನೇ ಶ್ರೀಮಂತರಾಗುವ ಕನಸು ಕಾಣುತ್ತಾರೆ. ಹಾಗಾದ್ರೆ ಈ ಪೌಡರ್ ಮಾರಿ ಈ ಮೂವರು ಶ್ರೀಮಂತರಾಗುತ್ತಾರೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ನೀವು ಚಿತ್ರಮಂದಿರಕ್ಕೆ ಬರಬೇಕು.
ಚಿತ್ರದಲ್ಲಿ ದಿಗಂತ್, ಧನ್ಯಾ ರಾಮ್ ಕುಮಾರ್ ಪಾತ್ರಗಳಿಗೆ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆ ಸಿಕ್ಕಿದೆ. ಇವರ ಜೊತೆ ಡ್ರಗ್ಸ್ ಮಾರಾಟ ಮಾಡುವ ಅಣ್ಣಾಚಿ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ತಮಿಳು ಭಾಷೆಯಲ್ಲಿ ಮಾತನಾಡುತ್ತಾ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ. ರಂಗಾಯಣ ರಘು ಎದುರಾಳಿಯಾಗಿ ಸುಲೇಮಾನ್ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಮೇಕಪ್ ಮಲ್ಲಿಕಾ ಪಾತ್ರದಲ್ಲಿ ಶರ್ಮಿಳಾ ಮಾಂಡ್ರೆ, ವಯಸ್ಸು 35ದಾದರೂ ಮದುವೆ ಆಗದ ಪಾತ್ರದಲ್ಲಿ ರವಿಶಂಕರ್ ಹಾಗೂ ಬ್ರೂಸ್ಲಿ ಪಾತ್ರದಲ್ಲಿ ನಾಗಭೂಷಣ್ ಕ್ಯಾರೆಕ್ಟರ್ಗಳು ಸಿನಿಪ್ರಿಯರನ್ನು ನಕ್ಕು ನಲಿಸುತ್ತವೆ.