ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಕಮಲ್ ಹಾಸನ್ ಹಾಗೂ ಹೆಸರಾಂತ ನಿರ್ದೇಶಕ ಮಣಿರತ್ನಂ ಕಾಂಬಿನೇಶನ್ನ ಬಹುನಿರೀಕ್ಷಿತ ಚಿತ್ರ 'ಥಗ್ ಲೈಫ್'. ಚಿತ್ರದಲ್ಲಿ ಜಯಂ ರವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೀಗ ಈ ಪಾತ್ರಕ್ಕೆ ಅರವಿಂದ್ ಸ್ವಾಮಿ ಬರುವ ಸಾಧ್ಯತೆಗಳಿವೆ.
ಬಹುನಿರೀಕ್ಷಿತ 'ಥಗ್ ಲೈಫ್'ನ ಚಿತ್ರೀಕರಣ ಜನವರಿಯಲ್ಲಿ ಪ್ರಾರಂಭವಾಯಿತು. ಆದ್ರೆ, ಕಮಲ್ ಹಾಸನ್ ಅವರ ರಾಜಕೀಯ ಬದ್ಧತೆ ಹಿನ್ನೆಲೆ ಹಿನ್ನೆಡೆಯಾಗಿದೆ. ಚಿತ್ರೀಕರಣ ವಿಳಂಬ ಪರಿಣಾಮ, ದುಲ್ಕರ್ ಸಲ್ಮಾನ್ ಮತ್ತು ಜಯಂ ರವಿ ಚಿತ್ರದಿಂದ ಹೊರಬಂದಿದ್ದಾರೆ.
ಮಣಿರತ್ನಂ ನಿರ್ದೇಶನದ ಸಿನಿಮಾ ಸುತ್ತಲಿರುವ ಸದ್ಯದ ಮಾಹಿತಿ ಪ್ರಕಾರ, ಥಗ್ ಲೈಫ್‌ನಲ್ಲಿನ ಜಯಂ ರವಿ ಸ್ಥಾನಕ್ಕೆ ಅರವಿಂದ್ ಸ್ವಾಮಿ ಅವರನ್ನು ಕರೆತರಲಾಗಿದೆ. ಆರಂಭದಲ್ಲಿ, ಅರುಣ್ ವಿಜಯ್ ಈ ಚಿತ್ರದ ಭಾಗವಾಗಲಿದ್ದಾರೆ ಎಂದು ಊಹಿಸಲಾಯ್ತು. ಆದ್ರೆ ಲೇಟೆಸ್ಟ್ ಅಪ್ಟೇಟ್ಸ್ ಬೇರೆಯದ್ದೇ ಸೂಚಿಸಿದೆ. ಆದಾಗ್ಯೂ, ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.
ಥಗ್ ಲೈಫ್‌ನ ಮುಂದಿನ ಶೂಟಿಂಗ್ ಸೆರ್ಬಿಯಾದಲ್ಲಿ ನಡೆಯಲಿದೆ. ಇದೇ ಏಪ್ರಿಲ್ ಅಂತ್ಯದ ವೇಳೆಗೆ ಚಿತ್ರೀಕರಣದ ಮುಂದಿನ ಹಂತ ಪ್ರಾರಂಭವಾಗಲಿದೆ. ಈ ನಿರ್ಣಾಯಕ ಹಂತದಲ್ಲಿ ಪ್ರಮುಖ ನಟರು ಭಾಗಿಯಾಗಲಿದ್ದಾರೆ. ಇಲ್ಲಿ ಚಿತ್ರದ ನಟರು ಅಂತಿಮವಾಗೋ ಸಾಧ್ಯತೆ ಇದೆ. ಥಗ್ ಲೈಫ್ ಪೀರಿಯಾಡಿಕಲ್ ಆ್ಯಕ್ಷನ್ ಡ್ರಾಮಾ ಎಂದು ಹೇಳಲಾಗಿದೆ. ಕಮಲ್ ಹಾಸನ್ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.