ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಪುನೀತ್ ರಾಜ್ಕುಮಾರ್ ನಮ್ಮೆಲ್ಲರನ್ನು ಅಗಲಿ ದಿನಗಳು ಉರುಳಿವೆ. ಆದರೆ ಅವರ ನೆನಪು ಮಾತ್ರ ಸದಾ ಜೀವಂತ. ಅವರ ಸಿನಿಮಾ ಮತ್ತು ಸಾಮಾಜಿಕ ಸೇವೆ ಹೆಚ್ಚಿನ ಸಂಖ್ಯೆಯ ಜನರಲ್ಲಿ ಅಚ್ಚಳಿಯದೇ ಉಳಿದಿದೆ. ಅಪ್ಪು ಹೆಸರಲ್ಲಿ ಮಾನವೀಯ ಕಾರ್ಯಗಳು ಮತ್ತು ಅವರ ಸ್ಮರಣೆ ಮುಂದುವರೆದಿದೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಅವರು ಪುನೀತ್ ರಾಜ್ಕುಮಾರ್ ಕುರಿತಾದ ವಿಶೇಷ ಪೋಸ್ಟ್ ಶೇರ್ ಮಾಡೋ ಮೂಲಕ ಗಮನ ಸೆಳೆದಿದ್ದಾರೆ.
'ಜಾಕಿ', 2010ರ ಅಕ್ಟೋಬರ್ 14ರಂದು ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ಸಿನಿಮಾ. ಬಹುತೇಕ ಉತ್ತಮ ಪ್ರತಿಕ್ರಿಯೆ ಗಳಿಸಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆ ವಿಚಾರದಲ್ಲೂ ಯಶ ಕಂಡಿತ್ತು. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಹಾಗೂ ಭಾವನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ, ಸುಮಿತ್ರಾ, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ, ವಿಕಾಸ್ ಸೇರಿದಂತೆ ಹಲವರು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದರು. ಪಾರ್ವತಮ್ಮ ರಾಜ್ಕುಮಾರ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದರು.
ಪುನೀತ್ ರಾಜ್ಕುಮಾರ್ ವೃತ್ತಿಜೀವನದಲ್ಲಿ ಈ ಚಿತ್ರ ಮಹತ್ವದ ಪಾತ್ರ ವಹಿಸಿದೆ. ಕನ್ನಡದಲ್ಲಿ ಇದು ಯಶಸ್ವಿ ಚಿತ್ರಗಳಲ್ಲೊಂದು. ಹರ್ಷಿಕಾ ಪೂಣಚ್ಚ ಅವರ ಆರಂಭದ ದಿನಗಳಲ್ಲಿ ಸಿಕ್ಕ ಸಿನಿಮಾ. ಸದ್ಯ ನಟಿ ತಮ್ಮ ಅನುಭವ, ಅಪ್ಪು ಕೊಟ್ಟ ಸಾಥ್ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪುನೀತ್ ಅವರ ಜೊತೆಗಿನ ಒಂದು ಫೋಟೋ ಕೂಡಾ ಶೇರ್ ಮಾಡಿದ್ದಾರೆ.