'ಭೈರತಿ ರಣಗಲ್' ಸೂಪರ್ ಹಿಟ್ ಸಕ್ಸಸ್ ಖುಷಿಯಲ್ಲಿರುವ ಭಜರಂಗಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ 'ಸೆಂಚುರಿ ಸ್ಟಾರ್' ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರಾದ ಪವನ್ ಒಡೆಯರ್ ಜೊತೆ ಕೈ ಜೋಡಿಸಿದ್ದಾರೆ. ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಖುಷಿಯಲ್ಲಿ ಪವನ್ ಒಡೆಯರ್ ಇದ್ದು, ಮುಂಬರುವ ಸಿನಿಮಾ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.
ಪವನ್ ಒಡೆಯರ್ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಹೆಸರು ಮಾಡಿದ್ದಾರೆ. 'ಡೊಳ್ಳು' ಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಅವರು ತಮ್ಮ ಮೊದಲ ನಿರ್ಮಾಣದಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. 'ಅವಸ್ತಿ vs ಅವಸ್ತಿ' ಎಂಬ ಬಾಲಿವುಡ್ ಚಿತ್ರ ನಿರ್ಮಿಸಿರುವ ಪವನ್ ಒಡೆಯರ್ ಸದ್ಯ 'ವೆಂಕ್ಯಾ' ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ, ತಮ್ಮ ಒಡೆಯರ್ ಮೂವೀಸ್ ಬ್ಯಾನರ್ ಅಡಿ ನಾಲ್ಕನೇ ಚಿತ್ರ ನಿರ್ಮಿಸುತ್ತಿದ್ದಾರೆ. ಅದು ಕೂಡಾ ಶಿವಣ್ಣನಿಗೆ ಅನ್ನೋದೇ ವಿಶೇಷ.
2025ಕ್ಕೆ ಶಿವಣ್ಣ ಹಾಗೂ ಪವನ್ ಕಾಂಬಿನೇಷನ್ನ ಈ ಪ್ರಾಜೆಕ್ಟ್ ಟೇಕಾಫ್ ಆಗಲಿದೆ. ಕರುನಾಡ ಚಕ್ರವರ್ತಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದರ ಬಗ್ಗೆ ಸಂತಸ ಹಂಚಿಕೊಂಡಿರುವ ಪವನ್ ಒಡೆಯರ್, "ಪ್ರತಿಯೊಬ್ಬ ನಿರ್ದೇಶಕರಿಗೂ ಶಿವಣ್ಣನಿಗೆ ಸಿನಿಮಾ ಮಾಡಬೇಕೆಂಬ ಕನಸಿರುತ್ತದೆ. ನನ್ನ ಈ ಕನಸೀಗ ನನಸಾಗುತ್ತಿದೆ. ಥ್ರಿಲ್ಲರ್ ಜೊತೆಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್ಟೈನರ್ ಚಿತ್ರ ನಿರ್ದೇಶನ ಮಾಡುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಸದ್ಯ ರಿವೀಲ್ ಮಾಡಲು ಆಗುತ್ತಿಲ್ಲ. ಆದರೆ ಈ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಶಿವಣ್ಣ ವಿಭಿನ್ನವಾಗಿ ಕಾಣಲಿದ್ದಾರೆ" ಎಂದು ಭರವಸೆ ನೀಡಿದರು.