2023ರ ಕೊನೆಯಲ್ಲಿ ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ 'ಅನಿಮಲ್' ಸಿನಿಮಾ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಬಹು ನಿರೀಕ್ಷೆಗಳೊಂದಿಗೆ ಡಿಸೆಂಬರ್ನಲ್ಲಿ ಚಿತ್ರಮಂದಿರ ಪ್ರವೇಶಿಸಿದ 'ಅನಿಮಲ್' ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ. ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಣೆ ಮಾಡದವರು ಒಟಿಟಿಗೆ 'ಅನಿಮಲ್' ಯಾವಾಗ ಬರಲಿದೆ ಎಂದು ಕುತೂಹಲ ಭರಿತರಾಗಿದ್ದರು. ಫೈನಲಿ ಸಿನಿಮಾ ಒಟಿಟಿ ಪ್ರವೇಶಿಸಲು ಕ್ಷಣಗಣನೆ ಆರಂಭವಾಗಿದೆ.
ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡಿರುವ 'ಅನಿಮಲ್' ಗಣರಾಜ್ಯೋತ್ಸವದಂದು ಒಟಿಟಿ ಪ್ರವೇಶಿಸಲಿದೆ. ಹೌದು ನಾಳೆ - ಜನವರಿ 26ರಂದು ಡಿಜಿಟಲ್ ಪ್ರೀಮಿಯರ್ ಆಗಲಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ 2023ರ ಡಿಸೆಂಬರ್ 1ರಂದು ಥಿಯೇಟರ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಯಿತು. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 550 ಕೋಟಿ ರೂ. ಕಲೆಕ್ಷನ್ ಮಾಡಿದ 'ಅನಿಮಲ್' ಜಾಗತಿಕವಾಗಿ 900 ಕೋಟಿ ರೂಪಾಯಿಯ ವ್ಯವಹಾರ ನಡೆಸಿತು. ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಸಲುವಾಗಿ ಸಿನಿಮಾ ನಾಳೆ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಡಲಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಚಲನಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದಾಗಿದೆ.
ಸಹ - ನಿರ್ಮಾಪಕರಾದ ಟೀ ಸೀರಿಸ್ ಮತ್ತು ಸಿನಿ 1 ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್ ತಮ್ಮ ಭಿನ್ನಾಭಿಪ್ರಾಯ ಇತ್ಯರ್ಥಪಡಿಸಿಕೊಂಡ ನಂತರ ಈ ಬೆಳವಣಿಗೆ ನಡೆದಿದೆ. ತಮ್ಮ ಸಿನಿಮಾ ನಿರ್ಮಾಣ ಒಪ್ಪಂದದ ಉಲ್ಲಂಘನೆ ವಿಚಾರವಾಗಿ ಕಾನೂನು ಹೋರಾಟ ಎದುರಿಸಿದ್ದರು. ಎರಡೂ ಕಡೆಯವರು ತಮ್ಮ ಒಪ್ಪಂದವನ್ನು ದೆಹಲಿ ಹೈಕೋರ್ಟ್‌ನಲ್ಲಿ ಬಹಿರಂಗಪಡಿಸಿದರು. ಅಂತಿಮವಾಗಿ ಭಿನ್ನಾಭಿಪ್ರಾಯ ಇತ್ಯರ್ಥಪಡಿಸಿಕೊಳ್ಳಲಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.