ಭಾರತ ಮಾತ್ರವಲ್ಲದೇ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವ ಅಂಬಾನಿ ಕುಟುಂಬ ಸದ್ಯ ಮನೆಮಗನ ಮದುವೆ ಸಲುವಾಗಿ ಸುದ್ದಿಯಲ್ಲಿದೆ. ದೇಶದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಕಿರಿಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಕೈ ಹಿಡಿಯಲಿದ್ದು, ಸದ್ಯ ಎರಡನೇ ವಿವಾಹಪೂರ್ವ ಸಮಾರಂಭ ನಡೆಯುತ್ತಿದೆ. ಮದುವೆ ಯಾವಾಗ ಎಂಬ ಕುತೂಹಲದಲ್ಲಿ ನೆಟ್ಟಿಗರಿದ್ದರು. ಜೂನ್ ಅಥವಾ ಜುಲೈನಲ್ಲಿ ಅದ್ಧೂರಿ ವಿವಾಹ ಸಮಾರಂಭ ಜರುಗಲಿದೆ ಎಂದು ಹೇಳಲಾಗಿತ್ತು. ಇದೀಗ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಜುಲೈ 12ರಂದು ಅಂಬಾನಿಯವರ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿ ಆಚರಣೆ ನಡೆಯಲಿದೆ. ವಿಶೇಷ ದಿನ ಸಮೀಪಿಸುತ್ತಿದ್ದಂತೆ, ಅಂಬಾನಿ ಕುಟುಂಬ ಅತಿಥಿಗಳಿಗೆ ಆಮಂತ್ರಣ ಕಳುಹಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ರೆಡ್, ಗೋಲ್ಡನ್ ಕಲರ್ನಲ್ಲಿ ರೆಡಿ ಮಾಡಲಾಗಿರುವ ಆಮಂತ್ರಣ ಪತ್ರಿಕೆ ಮೂರು ದಿನಗಳ ಸಂಭ್ರಮಾಚರಣೆಯ ವಿವರಗಳನ್ನು ಬಹಿರಂಗಪಡಿಸಿದೆ. ಜುಲೈ 12 ರಂದು ಶುಭ ವಿವಾಹ ಸಮಾರಂಭದೊಂದಿಗೆ ಉತ್ಸವ ಪ್ರಾರಂಭವಾಗುತ್ತದೆ. ಅತಿಥಿಗಳಿಗೆ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಲು ವಿನಂತಿಸಲಾಗಿದೆ. ಮರುದಿನ, ಶನಿವಾರ (ಜುಲೈ 13) ಶುಭ ಆಶೀರ್ವಾದ ಸಮಾರಂಭ ಜರುಗಲಿದೆ. ಅತಿಥಿಗಳಿಗೆ ಇಂಡಿಯನ್ ಫಾರ್ಮಲ್ ಡ್ರೆಸ್ ಧರಿಸಲು ಕೋರಲಾಗಿದೆ.
ಮದುವೆಯ ಕೊನೆಯ ಕಾರ್ಯಕ್ರಮ ಜುಲೈ 14ರ ಭಾನುವಾರದಂದು ನಡೆಯಲಿದೆ. ಮಂಗಲ್ ಉತ್ಸವ ಅಥವಾ ಆರತಕ್ಷತೆ ಸಮಾರಂಭವಿದು. ಇಲ್ಲಿಯೂ ಅತಿಥಿಗಳಿಗೆ ಇಂಡಿಯನ್ ಚಿಕ್ ಔಟ್ಫಿಟ್ ಧರಿಸುವಂತೆ ಕೇಳಿಕೊಳ್ಳಲಾಗಿದೆ. ಈ ಮೂರು ಕಾರ್ಯಕ್ರಮಗಳು ಮುಂಬೈ, ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ.