ಚೆನ್ನೈ(ತಮಿಳುನಾಡು):ಭಾರತೀಯ ಚಿತ್ರರಂಗದ ಹಿರಿಯ, ಬಹುಬೇಡಿಕೆ ನಟ ಅಮಿತಾಭ್ ಬಚ್ಚನ್ ಅವರು ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೇಲೆ ಹೊಂದಿರುವ ಅಗಾಧ ಅಭಿಮಾನ ಎಲ್ಲರಿಗೂ ತಿಳಿದಿರುವ ವಿಚಾರ. ಶುಕ್ರವಾರ ಚೆನ್ನೈನಲ್ಲಿ ನಡೆದ ಬಹುನಿರೀಕ್ಷಿತ ಚಿತ್ರ 'ವೆಟ್ಟೈಯನ್'ನ ಪ್ರಿವ್ಯೂ ಮತ್ತು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದೆ.
ಸೆಪ್ಟೆಂಬರ್ 20ರಂದು ಚೆನ್ನೈನಲ್ಲಿ ನಡೆದ ಸಿನಿಮಾ ಪ್ರಮೋಶನ್ ಈವೆಂಟ್ಗೆ ಬಿಗ್ ಬಿ ಆಗಮಿಸಲು ಸಾಧ್ಯವಾಗಿಲ್ಲವಾದರೂ, ಹೃದಯಸ್ಪರ್ಶಿ ವಿಡಿಯೋ ಸಂದೇಶದ ಮೂಲಕ ಅಭಿಮಾನಿಗಳು ಮತ್ತು ಚಿತ್ರತಂಡದೊಂದಿಗೆ ಸಂಪರ್ಕ ಸಾಧಿಸಿದ್ದಾರೆ. 'ವೆಟ್ಟೈಯನ್'ನ ಪ್ರಿವ್ಯೂ ಮತ್ತು ಆಡಿಯೋ ರಿಲೀಸ್ ಈವೆಂಟ್‌ನ ಕೆಲ ಹೈಲೆಟ್ಸ್ ಇಲ್ಲಿವೆ.
'ಸುಪ್ರೀಮ್ ಆಫ್ ಆಲ್ ಸ್ಟಾರ್ಸ್': ಬಿಗ್ ಬಿ
ತಮ್ಮ ವಿಡಿಯೋದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ದಕ್ಷಿಣ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಅವರನ್ನು "ಸುಪ್ರೀಮ್ ಆಫ್ ಆಲ್ ಸ್ಟಾರ್ಸ್" ಎಂದು ಉಲ್ಲೇಖಿಸಿದ್ದಾರೆ. ಈ ಗುಣಗಾನ ಪ್ರೇಕ್ಷಕರಿಂದ ಹರ್ಷೋದ್ಗಾರ ಮತ್ತು ಚಪ್ಪಾಳೆಗಳನ್ನು ಸ್ವೀಕರಿಸಿತು. "ವೆಟ್ಟೈಯನ್ ನನ್ನ ಚೊಚ್ಚಲ ತಮಿಳು ಚಿತ್ರ, ಗೌರವಕರ ವಿಷಯ. ರಜನಿಕಾಂತ್ ಎಲ್ಲ ಸ್ಟಾರ್‌ಗಳಿಗಿಂತಲೂ ಸರ್ವೋಚ್ಛ" ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
'ರಜನಿ ನೆಲದ ಮೇಲೆ ಮಲಗುತ್ತಿದ್ದರು':1991ರ ಬ್ಲಾಕ್‌ಬಸ್ಟರ್ 'ಹಮ್' ಚಿತ್ರದಲ್ಲಿ ರಜನಿಕಾಂತ್ ಮತ್ತು ಅಮಿತಾಭ್ ಸಹೋದರರ ಪಾತ್ರ ನಿರ್ವಹಿಸಿದ್ದರು. ವಿಡಿಯೋದಲ್ಲಿ, ಬಿಗ್ ಬಿ ಶೂಟಿಂಗ್ ಕ್ಷಣಗಳನ್ನು ನೆನಪಿಸಿಕೊಂಡರು. ಹಮ್ ಚಿತ್ರೀಕರಣದ ವೇಳೆ ನಾನು ನನ್ನ ಎಸಿ ವಾಹನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ರಜನಿ ಬ್ರೇಕ್ ಟೈಮ್ನಲ್ಲಿ ನೆಲದ ಮೇಲೆ ಮಲಗುತ್ತಿದ್ದರು. ಅವರ ಸರಳತೆ ನೋಡಿ ನಾನು ವಾಹನದಿಂದ ಹೊರಬಂದು ಹೊರಗೆ ವಿಶ್ರಾಂತಿ ಪಡೆದೆ ಎಂದು ಹಳೇ ನೆನಪುಗಳನ್ನು ಮೆಲುಕು ಹಾಕಿದರು.
'ಬಿಗ್ ಬಿ ಯಶಸ್ಸಿನ ಅವನತಿಗಾಗಿ ಜಗತ್ತು ಕಾದಿತ್ತು':ಈವೆಂಟ್ನಲ್ಲಿ, ಅಮಿತಾಭ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಕೆಲ ಸವಾಲುಗಳನ್ನು ರಜನಿ ವಿವರಿಸಿದರು. "ಅಮಿತ್ ಜಿ ಸಿನಿಮಾಗಳನ್ನು ನಿರ್ಮಿಸುವ ಸಂದರ್ಭ ಅವರು ದೊಡ್ಡ ನಷ್ಟವನ್ನು ಎದುರಿಸಿದ್ದರು. ಎಷ್ಟರ ಮಟ್ಟಿಗೆಂದರೆ ತಮ್ಮ ವಾಚ್‌ಮ್ಯಾನ್‌ಗೆ ಸಂಬಳ ಪಾವತಿಸಲು ಸಹ ಸಾಧ್ಯವಾಗಲಿಲ್ಲ. ಅವರ ಜುಹು ನಿವಾಸ ಪಬ್ಲಿಕ್ ಬಿಡ್ಡಿಂಗ್‌ಗೆ ಹೋಗಿತ್ತು. ಆ ಸಂದರ್ಭ ಬಾಲಿವುಡ್ ಅವರನ್ನು ನೋಡಿ ನಗುತ್ತಿತ್ತು. ಅವರ ಯಶಸ್ಸಿನ ಅವನತಿಗಾಗಿ ಜಗತ್ತು ಕಾದಿತ್ತು'' ಎಂದು ತಿಳಿಸಿದರು.