ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಪುಷ್ಪ-2: ದಿ ರೂಲ್' ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ. ಆದ್ರೆ ದುರ್ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಸದ್ಯ ಈ ಪ್ರಕರಣದ ಬಗ್ಗೆ ಅಲ್ಲು ಅರ್ಜುನ್ ತಂಡ ಪ್ರತಿಕ್ರಯೆ ನೀಡಿದೆ.
ಮಹಿಳಾ ಅಭಿಮಾನಿ ಸಾವು:ಇಂದು ಸಿನಿಮಾದ ಅದ್ಧೂರಿ ಬಿಡುಗಡೆ ಹಿನ್ನೆಲೆ, ಕಳೆದ ರಾತ್ರಿ ಹೈದರಾಬಾದ್ನ ಆರ್ಟಿಸಿ ಕ್ರಾಸ್ ರೋಡ್ನ ಸಂಧ್ಯಾ ಥಿಯೇಟರ್ನಲ್ಲಿ ಬೆನಿಫಿಟ್ ಶೋ (ಪ್ರೀ ರಿಲೀಸ್/ಸ್ಪೆಷಲ್ ಶೋ) ಏರ್ಪಡಿಸಲಾಗಿತ್ತು. ಇಲ್ಲಿಗೆ ಅಲ್ಲು ಅರ್ಜುನ್ ಆಗಮಿಸಿದ್ದರು. ಹಾಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ಜಮಾಯಿಸಿದ್ದರು. ಸ್ಟಾರ್ ಹೀರೋನನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಮುಗಿಬಿದ್ದ ಹಿನ್ನೆಲೆ, ಕಾಲ್ತುಳಿತ ಉಂಟಾಯಿತು. ಘಟನೆಯಲ್ಲಿ ಮಹಿಳಾ ಅಭಿಮಾನಿ ಓರ್ವರು ಮೃತಪಟ್ಟಿದ್ದಾರೆ.
ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ, ಪೊಲೀಸರು ಜನರನ್ನು ಚದುರಿಸುವ ವೇಳೆ ರೇವತಿ ಎಂಬ ಮಹಿಳೆ ತಮ್ಮ ಮಗನೊಂದಿಗೆ ಕೆಳಗೆ ಬಿದ್ದಿದ್ದಾರೆ. ಕಾಲ್ತುಳಿತಕ್ಕೆ ಒಳಗಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಆ ಕೂಡಲೇ ಪೊಲೀಸರು ಅಮ್ಮ ಮಗನನ್ನು ಪಕ್ಕಕ್ಕೆ ಕರೆದೊಯ್ದು ಸಿಪಿಆರ್ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮೃತಪಟ್ಟಿದ್ದಾರೆ. ಮಗನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಹೀಗಿದೆ ಅಲ್ಲು ಅರ್ಜುನ್ ತಂಡದ ಪ್ರತಿಕ್ರಿಯೆ? ಸಂಧ್ಯಾ ಥಿಯೇಟರ್ನಲ್ಲಾದ ಘಟನೆಗೆ ಪ್ರತಿಕ್ರಿಯಿಸಿದ ಅಲ್ಲು ಅರ್ಜುನ್ ತಂಡ, ಕಾಲ್ತುಳಿತದ ಘಟನೆ ನಿಜಕ್ಕೂ ದುರಾದೃಷ್ಟಕರ. ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದೆ.
ಸುಳ್ಳು ಸುದ್ದಿಗಳನ್ನು ಹರಡಿಸಬೇಡಿ: ಗಾಯಗೊಂಡ ಬಾಲಕ ಶ್ರೀತೇಜ್ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 78 ಗಂಟೆ ಕಳೆಯೋವರೆಗೂ ಬಾಲಕನ ಆರೋಗ್ಯದ ಬಗ್ಗೆ ಏನೂ ಹೇಳಲಾಗದು. ಸದ್ಯ ಶ್ರೀತೇಜ್‌ಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹಲವು ಯೂಟ್ಯೂಬ್ ಚಾನಲ್ಗಳು ಬಾಲಕ ಮೃತಪಟ್ಟಿದ್ದಾನೆ ಎಂದು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಈ ಬಗ್ಗೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ದಯವಿಟ್ಟು ಇಂತಹ ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಎಂದ ಅಲ್ಲು ಅರ್ಜುನ್ ತಂಡ, ಎಲ್ಲರೂ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಕೋರಿದೆ.