ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಪುಷ್ಪಾ- 2 ದ ರೂಲ್ ಪ್ರೀಮಿಯರ್ ಶೋ ವೇಳೆ ದುರಂತ ಸಂಭವಿಸಿತ್ತು. ಜನಸಂದಣಿಯಿಂದಾಗಿ ಮಹಿಳಾ ಅಭಿಮಾನಿ ರೇವತಿ (35) ಕಾಲ್ತುಳಿತದಲ್ಲಿ ಸಾವನ್ನಪ್ಪಿದರೆ, ಅವರ 13 ವರ್ಷ ವಯಸ್ಸಿನ ಮಗ ಶ್ರೀ ತೇಜ್ ತೀವ್ರವಾಗಿ ಗಾಯಗೊಂಡಿದ್ದಾನೆ. ಆ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಚಿತ್ರದ ನಾಯಕ ಅಲ್ಲು ಅರ್ಜುನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೃತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಒದಗಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಮಹಿಳೆಯ ಮಗನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಪುಷ್ಪಾ ಹೀರೋ ಘೋಷಿಸಿದ್ದಾರೆ.
ಸಂತ್ರಸ್ತ ಕುಟುಂಬವನ್ನು ಭೇಟಿ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ಅಲ್ಲು ಅರ್ಜುನ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಕುರಿತು ಎಕ್ಸ್ ಪೋಸ್ಟ್ನಲ್ಲಿ ಬರೆದಿರುವ ನಟ ಅಲ್ಲು ಅರ್ಜುನ್, ಸಂಭವಿಸಿರುವ ದುರ್ಘಟನೆ ಅತ್ಯಂತ ಹೃದಯವಿದ್ರಾವಕವಾದದ್ದು. ಘಟನೆ/ ಸಂದಿಗ್ಧ ಪರಿಸ್ಥಿತಿಯಲ್ಲಿ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುತ್ತೇನೆ. ಈ ನೋವಿನಲ್ಲಿ ಆ ಸಂತ್ರಸ್ತ ಕುಟುಂಬ ಏಕಾಂಗಿಯಲ್ಲ. ಅವರೊಂದಿಗೆ ನಾನಿದ್ದೇನೆ. ವೈಯಕ್ತಿಕವಾಗಿ ಆ ಕುಟುಂಬವನ್ನು ಭೇಟಿ ಮಾಡುತ್ತೇನೆ. ಈ ಸವಾಲಿನ ಸಂದರ್ಭದಲ್ಲಿ ಅವರಿಗೆ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುತ್ತೇನೆ ಎಂದು ಬರೆದಿದ್ದಾರೆ.
ಡಿಸೆಂಬರ್ 4 ರಂದು ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ತನ್ನ ಮಗನೊಂದಿಗೆ ಆಗಮಿಸಿದ್ದ ಮಹಿಳೆ ಸಾವನ್ನಪ್ಪಿದ್ದಳು. ಅವರ ಮಗ ತೀವ್ರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಬಳಿಕ ನಟ ಅಲ್ಲು ಅರ್ಜುನ್, ಅವರ ಭದ್ರತಾ ಸಿಬ್ಬಂದಿ ಮತ್ತು ಥಿಯೇಟರ್ ಮಾಲೀಕರ ವಿರುದ್ಧ ಮೃತ ಮಹಿಳೆಯ ಪತಿ ನೀಡಿದ ದೂರು ಆಧರಿಸಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರಿಯ ವಲಯದ ಉಪ ಪೊಲೀಸ್ ಆಯುಕ್ತ ಆಕಾಂಶ್ ಯಾದವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಅಬ್ಬಬ್ಬಾ, ಆರ್ಆರ್ಆರ್ ದಾಖಲೆ ಪುಡಿಗಟ್ಟಿದ 'ಪುಷ್ಪ 2': ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಿದು