'ಖೇಲ್ ಖೇಲ್ ಮೆ', 2024ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್, ವಾಣಿ ಕಪೂರ್, ತಾಪ್ಸಿ ಪನ್ನು, ಆ್ಯಮಿ ವಿರ್ಕ್ ಮತ್ತು ಫರ್ದೀನ್ ಖಾನ್ ಅವರಂತಹ ತಾರಾ ಬಳಗವಿರುವ ಚಿತ್ರ ಪ್ರೇಕ್ಷಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸಿನಿಮಾದ ಅಪ್ಡೇಟ್ಸ್ಗಾಗಿ ಅಭಿಮಾನಿಗಳು ಕಾತರರಾಗಿದ್ದರು. ಇದೀಗ ಚಿತ್ರದ ಹಾಡೊಂದು ಅನಾವರಣಗೊಂಡು ಸಖತ್ ಸದ್ದು ಮಾಡುತ್ತಿದೆ.
'ಖೇಲ್ ಖೇಲ್ ಮೆ' ಚಿತ್ರದ ಮೊದಲ ಹಾಡು 'ಹೌಲಿ ಹೌಲಿ' ಇತ್ತೀಚೆಗಷ್ಟೇ ಅನಾವರಣಗೊಂಡಿತ್ತು. ಚಿತ್ರ ತಯಾರಕರಿಂದು ಎರಡನೇ ಟ್ರ್ಯಾಕ್ 'ದೂರ್ ನಾ ಕರಿನ್' ರಿಲೀಸ್ ಮಾಡಿ ಪ್ರೇಕ್ಷಕರ ಚರ್ಚೆಯ ವಿಷಯವಾಗುವಂತೆ ಮಾಡಿದೆ. ಸಾಂಗ್ನಲ್ಲಿ ಅಕ್ಷಯ್ ಮತ್ತು ವಾಣಿ ನಡುವಿನ ಕೆಮಿಸ್ಟ್ರಿ ಸಖತ್ತಾಗೇ ವರ್ಕ್ಔಟ್ ಆಗಿದೆ.
ರೊಮ್ಯಾಂಟಿಕ್ ಸಾಂಗ್ ಆಗಿರುವ 'ದೂರ್ ನಾ ಕರಿನ್' ವಿಶಾಲ್ ಕುಮಾರ್ ಮತ್ತು ಝಹ್ರಾ ಎಸ್ ಖಾನ್ ಅವರ ಸುಮಧುರ ದನಿಯಲ್ಲಿ ಮೂಡಿ ಬಂದಿದೆ. ಹಾಡು ಮೋಡಿ ಮಾಡುವಂತಹ ಸಾಹಿತ್ಯವನ್ನು ಒಳಗೊಂಡಿದೆ. ಸಂಪೂರ್ಣ ಹಾಡು ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ಆಕರ್ಷಿಸುತ್ತಿದೆ. ಹಾಡು ಪ್ರೇಮಾಂಕುರದ ಸಾರ ಸೆರೆ ಹಿಡಿದಿದೆ.
ಇನ್ನೂ ಸಿನಿಮಾದ ಮೊದಲ ಹಾಡು, 'ಹೌಲಿ ಹೌಲಿ' ಒಂದು ರೋಮಾಂಚಕ ಪಂಜಾಬಿ ಡ್ಯಾನ್ಸ್ ಆ್ಯಂಥಮ್ ಎಂದೇ ಹೇಳಬಹುದು. ಆ್ಯಮಿ ವಿರ್ಕ್, ತಾಪ್ಸಿ ಪನ್ನು, ವಾಣಿ ಕಪೂರ್, ಆದಿತ್ಯ ಸೀಲ್, ಪ್ರಜ್ಞಾ ಜೈಸ್ವಾಲ್ ಮತ್ತು ಫರ್ದೀನ್ ಖಾನ್ ಅವರನ್ನೊಳಗೊಂಡ ಹಾಡು ಪ್ರೇಕ್ಷಕರ ಗಮನ ಸೆಳೆಯುವಂತಹ ಕಲರ್ಫುಲ್ ಡ್ಯಾನ್ಸ್ ಸ್ಟೆಪ್ಗಳನ್ನು ಒಳಗೊಂಡಿದೆ. ಈ ಎನರ್ಜಿಟಿಕ್ ಸಾಂಗ್ನಲ್ಲಿ ನಟರು ಸಾಂಪ್ರದಾಯಿಕ ಕುರ್ತಾದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡರೆ, ನಟಿಮಣಿಯರು ಕಲರ್ಫುಲ್ ಲೆಹೆಂಗಾ ಮತ್ತು ಸೂಟ್‌ಗಳನ್ನು ತೊಟ್ಟು ಬೆರಗುಗೊಳಿಸುವ ನೋಟ ಬೀರಿದ್ದಾರೆ. ತಾರೆಯರು ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದು, ಸಾಂಗ್ನ ಬೀಟ್ಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶ ಕಂಡಿದೆ. ಈ ಹಾಡನ್ನು ಗುರು ರಾಂಧಾವಾ, ನೇಹಾ ಕಕ್ಕರ್ ಮತ್ತು ಹನಿ ಸಿಂಗ್ ಹಾಡಿದ್ದಾರೆ.