ಕನ್ನಡ ಚಿತ್ರರಂಗದಲ್ಲಿ 'ಕೃಷ್ಣ' ಎಂದೇ ಫೇಮಸ್ ಆಗಿರುವ ನಟ ಅಜಯ್ ರಾವ್. ವಿಭಿನ್ನ ಚಿತ್ರಗಳನ್ನು ಮಾಡುತ್ತಾ ಕನ್ನಡಿಗರ ಮನ ಗೆದ್ದಿರುವ ಇವರಿಗಿಂದು ಜನ್ಮದಿನದ ಸಂಭ್ರಮ. 44ನೇ ವಸಂತಕ್ಕೆ ಕಾಲಿಟ್ಟಿರುವ ಸ್ಯಾಂಡಲ್ವುಡ್ ಸ್ಟಾರ್ಗೆ ಕುಟುಂಬ ಸದಸ್ಯರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನಟ ಹೊಸ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
'ಎಕ್ಸ್ಕ್ಯೂಸ್ ಮಿ' ಸಿನಿಮಾ ಮೂಲಕ ಅಜಯ್ ರಾವ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ರಮ್ಯಾ ಹಾಗೂ ಸುನೀಲ್ ರಾವ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಅಜಯ್ ರಾವ್ ಸಿನಿಮಾ ಬದುಕಿನಲ್ಲಿ ಇದು ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಚೊಚ್ಚಲ ಚಿತ್ರದಲ್ಲೇ ಅಭೂತಪೂರ್ವ ಯಶ ಕಂಡ ಅಜಯ್ ಈವರೆಗೆ ಕೆಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. 2008ರಲ್ಲಿ ತೆರೆಕಂಡ 'ತಾಜ್ ಮಹಲ್' ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡರು. ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಸದ್ಯ ನಟ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಅಜಯ್ ರಾವ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆಯಾಗಿದೆ. 'ಧೈರ್ಯಂ' ನಿರ್ದೇಶಕ ಶಿವ ತೇಜಸ್ ಜೊತೆ ಅಜಯ್ ರಾವ್ ಕೈ ಜೋಡಿಸಿದ್ದಾರೆ. ಈ ಸಿನಿಮಾದಲ್ಲಿ ಶಿವ ತೇಜಸ್ ಮತ್ತು ಅಜಯ್ ರಾವ್ ಕೆಲಸ ಮಾಡಿದ್ದರು. ಇದೀಗ ಮತ್ತೊಮ್ಮೆ ಸಿನಿಮಾವೊಂದಕ್ಕೆ ಜೊತೆಯಾಗುತ್ತಿದ್ದಾರೆ. ಮಳೆ ಹಾಗು ದಿಲ್ ಪಸಂದ್ ಸಿನಿಮಾಗಳಿಗೆ ನಿರ್ದೇಶಕ ಶಿವ ತೇಜಸ್ ಜನಪ್ರಿಯರು. ತಮ್ಮ ಮುಂದಿನ ಹೊಸ ಚಿತ್ರಕ್ಕೆ ಶೀರ್ಷಿಕೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.