ಬಾಲಿವುಡ್ ನಟ ಅಜಯ್ ದೇವ್ಗನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ''ಮೈದಾನ್''. ಪ್ರೇಕ್ಷಕರು, ಇದೇ ಸಾಲಿನಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರದ ಟ್ರೇಲರ್ ನಿರೀಕ್ಷಿಸುತ್ತಿದ್ದಾರೆ. ಹೀಗಿರುವಾಗ ನಾಯಕ ನಟ ಸಿನಿಮಾದ ಸಣ್ಣ ವಿಡಿಯೋವೊಂದನ್ನು ಹಂಚಿಕೊಂಡು ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದಾರೆ.
ಸೂಪರ್ ಸ್ಟಾರ್ ಅಜಯ್ ದೇವ್ಗನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ 'ಮೈದಾನ್' ಶಾರ್ಟ್ ಗ್ಲಿಂಪ್ಸ್ ಶೇರ್ ಮಾಡಿದ್ದಾರೆ. ಪೋಸ್ಟ್ಗೆ, "ಮೈದಾನಕ್ಕೆ ಬನ್ನಿ. ಭಾರತೀಯ ಫುಟ್‌ಬಾಲ್‌ನ ಸುವರ್ಣ ಯುಗದ ನೈಜ ಕಥೆಯನ್ನು ಪ್ರಸ್ತುತಪಡಿಸಲು ಸಿದ್ಧರಿದ್ದೇವೆ" ಎಂಬ ಆಕರ್ಷಕ ಕ್ಯಾಪ್ಷನ್ ಕೊಟ್ಟಿದ್ದಾರೆ.
ಮೈದಾನ್ ವಿಡಿಯೋದಲ್ಲೇನಿದೆ? ಮಕ್ಕಳು ಮಳೆಯಲ್ಲಿ, ಬರಿಗಾಲಿನಲ್ಲಿ ಫುಟ್‌ಬಾಲ್ ಆಡುತ್ತಿರುವ ದೃಶ್ಯದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಮಕ್ಕಳು ಆಡುತ್ತಾ, ಫುಟ್‌ಬಾಲ್ ಅನ್ನು ರೈಲು ಹಳಿಯ ಇನ್ನೊಂದು ಬದಿಗೆ ಸಾಗಿಸಿದ್ದಾರೆ. ಆಗ ನಾಯಕ ನಟ ಅಜಯ್ ದೇವ್ಗನ್ ಅವರ ಎಂಟ್ರಿಯಾಗುತ್ತೆ. ನಟ ರೈಲು ಹಳಿಯ ಮತ್ತೊಂದು ಬದಿಯಲ್ಲಿರುತ್ತಾರೆ. ರೈಲು ಸಾಗುವ ಮುನ್ನ ಆ ಫುಟ್‌ಬಾಲ್ ಅನ್ನು ಒದ್ದು, ಮಕ್ಕಳಿಗೆ ತಲುಪುವಂತೆ ಮಾಡಿದ ದೃಶ್ಯದೊಂದಿಗೆ ಈ ವಿಡಿಯೋ ಪೂರ್ಣಗೊಳ್ಳುತ್ತದೆ. ಅಜಯ್ ದೇವ್ಗನ್ ಫುಟ್‌ಬಾಲ್ ಅನ್ನು ಹ್ಯಾಂಡಲ್ ಮಾಡಿದ ರೀತಿ ಬಹಳ ಆಕರ್ಷಕವಾಗಿದ್ದು, ಸಿನಿಮಾ ನೋಡುವ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.