ಬಾಲಿವುಡ್‌ನ ತಾರಾ ಜೋಡಿಗಳ ವೈಯಕ್ತಿಕ ಜೀವನ ಸದಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೊಳಗಾಗುತ್ತದೆ. ಅದರಲ್ಲೂ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ದಾಂಪತ್ಯ ಜೀವನ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ರೊಮ್ಯಾನ್ಸ್, ಗ್ಲ್ಯಾಮರ್ನಿಂದ ಗುರುತಿಸಲ್ಪಟ್ಟ ಅವರ ಸಂಬಂಧ ಕಳೆದ ಹಲವು ತಿಂಗಳುಗಳಿಂದ ತೀವ್ರ ಚರ್ಚೆಗೆ ಒಳಗಾಗಿದೆ. ವಿಶೇಷವಾಗಿ, ಜುಲೈನಲ್ಲಿ ಅನಂತ್ ಅಂಬಾನಿ ಅವರ ಅದ್ಧೂರಿ ವಿವಾಹ ಸಮಾರಂಭದಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಂಡ ನಂತರ ವದಂತಿಗಳು ಹೆಚ್ಚು ಉಲ್ಬಣಗೊಂಡವು.
ಸ್ಟಾರ್ ಕಪಲ್ನ ಸಂಬಂಧದ ಬಗ್ಗೆ ಅಭಿಮಾನಿಗಳು, ನೆಟ್ಟಿಗರಲ್ಲಿ ಹಲವು ಪ್ರಶ್ನೆಗಳಿವೆ. ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಪಿಸುಮಾತುಗಳು ವ್ಯಾಪಕವಾಗಿ ಕೇಳಿಬಂದಿವೆ. ತೀವ್ರ ವದಂತಿಗಳ ನಡುವೆ ಅಂಬಾನಿ ಕುಟುಂಬದ ವರ್ಣರಂಜಿತ ವಿವಾಹದ ಸಾಕ್ಷ್ಯಚಿತ್ರವು ಹೃದಯಸ್ಪರ್ಶಿ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಇದು ಅಭಿಮಾನಿಗಳಿಗೆ ಭರವಸೆಯ ಕಿರಣವಾಗಿದೆ.
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ವಿವಾಹ ಬಹಳ ಅದ್ಧೂರಿಯಾಗಿ ನಡೆದಿತ್ತು. ಕಳೆದ ವರ್ಷಾಂತ್ಯ ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನಗಳ ಕಾಲ ಅದ್ಧೂರಿ ವಿವಾಹ ಪೂರ್ವ ಸಮಾರಂಭ ಜರುಗಿತ್ತು. 'ಆ್ಯನ್ ಈವ್ನಿಂಗ್ ಇನ್ ಎವರ್‌ಲ್ಯಾಂಡ್,' 'ಅ ವಾಕ್ ಆನ್ ದಿ ವೈಲ್ಡ್‌ಸೈಡ್' ಮತ್ತು 'ಮೇಲಾ ರೂಜ್' ನಂತಹ ವಿವಿಧ ವಿಷಯಾಧಾರಿತ ಈವೆಂಟ್‌ಗಳನ್ನು ಒಳಗೊಂಡಿರುವ ಈ ಆಚರಣೆಗಳು ಈಗ ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿರುವ ಸಾಕ್ಷ್ಯಚಿತ್ರಗಳಲ್ಲಿ ಒಂದಾಗಿದೆ.
ಟೀಸರ್‌ನಲ್ಲಿ, ಐಶ್ವರ್ಯಾ ಮತ್ತು ಅಭಿಷೇಕ್ ಮ್ಯಾಚಿಂಗ್ ಉಡುಗೆಗಳನ್ನು ತೊಟ್ಟು, ಸೋಫಾದಲ್ಲಿ ಒಟ್ಟಿಗೆ ಕುಳಿತು ನೃತ್ಯ ಪ್ರದರ್ಶನಗಳನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅವರ ಮಗಳು ಆರಾಧ್ಯ ಅಪ್ಪ-ಅಮ್ಮನ ನಡುವೆ ಕುಳಿತಿದ್ದಾರೆ. ಮೂವರು ಬಹಳ ಖುಷಿಯಲ್ಲಿರೋದನ್ನು ಕಾಣಬಹುದು. ಇದು ಐಶ್-ಅಭಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆಯೆಂಬ ವದಂತಿಗೆ ಫುಲ್ ಸ್ಟಾಪ್ ಇಟ್ಟಿದೆ.
ಅಂಬಾನಿ ಮದುವೆ ಸಮಾರಂಭಕ್ಕೆ ಬಚ್ಚನ್ ಕುಟುಂಬ ಒಟ್ಟಾಗಿ ಎಂಟ್ರಿ ಕೊಟ್ಟರೆ, ಐಶ್ವರ್ಯಾ ಮತ್ತು ಆರಾಧ್ಯಾ ಪ್ರತ್ಯೇಕವಾಗಿ ಪ್ರವೇಶಿಸಿದರು. ಬಚ್ಚನ್ ಕುಟುಂಬಸ್ಥರಾದ ಅಮಿತಾಭ್, ಜಯಾ, ಅಭಿಷೇಕ್, ಶ್ವೇತಾ ಮತ್ತು ಮೊಮ್ಮಕ್ಕಳು ಒಟ್ಟಿಗೆ ಆಗಮಿಸಿ, ಐಶ್ ಸಪರೇಟ್ ಎಂಟ್ರಿ ಕೊಟ್ಟ ಹಿನ್ನೆಲೆ ವದಂತಿಗಳು ಪ್ರಾರಂಭವಾದವು. ಪ್ರತ್ಯೇಕ ಪ್ರವೇಶ ದಾಂಪತ್ಯ ಜೀವನದಲ್ಲಿ ಅಥವಾ ಬಚ್ಚನ್ ಕುಟುಂಬ ಮತ್ತು ಐಶ್ ನಡುವೆ ಬಿರುಕು ಮೂಡಿದೆಯೆಂಬ ಊಹಾಪೋಹವನ್ನು ಹುಟ್ಟುಹಾಕಿತು.