ರಕ್ಷಾಬಂಧನ ಅನೇಕರ ಬಾಳಲ್ಲಿ ಪ್ರಮುಖ ಹಬ್ಬ. ಬಹುತೇಕರು ತಮ್ಮದೇ ಆದ ರೀತಿಯಲ್ಲಿ ಈ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲ್ಪಡುವ ರಕ್ಷಾಬಂಧನಕ್ಕೆ ಭಾರತದಲ್ಲಿ ವಿಶೇಷ ಮಾನ್ಯತೆ ಇದೆ. ಸಹೋದರಿಯರು ತಮ್ಮ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟುವ ಮೂಲಕ ತಮ್ಮ ನಡುವಿನ ಪ್ರೀತಿ, ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ. ಜೊತೆಗೆ, ಪರಸ್ಪರ ಶುಭ ಹಾರೈಸಿಕೊಳ್ಳುತ್ತಾರೆ.
ಮಂಗಳವಾರ ಹೆಚ್ಚಿನವರು ಈ ಹಬ್ಬವನ್ನು ಆಚರಿಸಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳೂ ಸಹ ಇದರಿಂದ ಹೊರತಲ್ಲ. ಸ್ಯಾಂಡಲ್ವುಡ್ನ ಅನೇಕ ತಾರೆಯರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದರು.
ಇದೀಗ ಹಿರಿಯ ನಟಿ ಶ್ರುತಿ ಕರುನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ರಾಖಿ ಕಟ್ಟಿ ಹಬ್ಬಾಚರಿಸಿದ್ದಾರೆ. ಶೃತಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
'ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಹಾಗೂ ಪೂಜ್ಯರ ಆಶೀರ್ವಾದ ಪಡೆದು, ರಕ್ಷಾ ಬಂಧನದ ದಿನ ರಾಖಿ ಕಟ್ಟಿ ಆಶೀರ್ವಾದ ಪಡೆದ ನಾವು ಧನ್ಯ. ಶ್ರೀ ಮಂಜುನಾಥ ನಿಮ್ಮಲ್ಲರಿಗೂ ಒಳ್ಳೆಯದನ್ನು ಮಾಡಲಿ' ಎಂದು ಬರೆದುಕೊಂಡಿದ್ದಾರೆ.
ನಟಿ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿದ್ದು ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ನಟಿಯ ಪೋಸ್ಟ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, 'ಅದೃಷ್ಟವಂತರು ನೀವೇ ಮೇಡಂ' ಎಂದು ತಿಳಿಸಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ, 'ಶ್ರುತಿ ಮೇಡಂ. ನಿಮ್ಮನ್ನು ನೋಡಿ ಬಹಳ ಸಂತೋಷವಾಗಿದೆ. ಪೂಜ್ಯರಿಂದ ಆಶೀರ್ವಾದ ಪಡೆಯುತ್ತಿರುವುದನ್ನು ಕಂಡು ಖುಷಿಯಾಯಿತು. ನಿಮ್ಮ ಮಗಳು ಯಾವಾಗ ಸಿನಿಮಾ ಪ್ರವೇಶಿಸಲಿದ್ದಾರೆ? ಅವರು ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಶ್ರುತಿ ಅವರ ಪರಂಪರೆ ಮುಂದುವರಿಯಬೇಕು' ಎಂದು ಬರೆದಿದ್ದಾರೆ. 'ನಿಮಗೆ ಉತ್ತಮ ಅವಕಾಶ ಸಿಕ್ಕಿದೆಯೆಂದು ನನಗನಿಸುತ್ತಿದೆ' ಎಂದು ಮತ್ತೋರ್ವ ನೆಟ್ಟಿಗ ಪ್ರತಿಕ್ರಿಯಿಸಿದ್ದಾರೆ.