ಸಹಜ ಅಭಿನಯ, ಸರಳ ಸೌಂದರ್ಯದಿಂದಲೇ ಸ್ಯಾಂಡಲ್ವುಡ್ ನ್ಯೂ ಕ್ರಶ್ ಎನಿಸಿಕೊಂಡಿರುವ ಸಂಜನಾ ಆನಂದ್ ಈಗ ಮುಧೋಳ್ ಬಳಗ ಸೇರಿಕೊಂಡಿದ್ದಾರೆ. 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಸಂಜನಾ ಆನಂದ್ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡರು.
ದುನಿಯಾ ವಿಜಯ್ ಸಾರಥ್ಯದ 'ಸಲಗ' ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಈ ಬ್ಯೂಟಿ ಟಾಲಿವುಡ್ ಕೂಡ ಪ್ರವೇಶಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು ಅಂಗಳದಲ್ಲಿಯೂ ಬ್ಯುಸಿಯಾಗಿರುವ ಸಂಜನಾ ಆನಂದ್, ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ.
ಹೌದು, ತ್ರಿವಿಕ್ರಮ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಈಗ ಎರಡನೇ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಮುಧೋಳ್ ಮೂಲಕ ಸಖತ್ ಮಾಸ್ ಅವತಾರ ತಾಳಿರುವ ವಿಕ್ಕಿಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸುತ್ತಿದ್ದಾರೆ. ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಂಜನಾ ನಾಯಕಿ ಎಂಬ ವಿಷಯ ಹರಿದಾಡಿತ್ತು. ಆದ್ರೆ ಚಿತ್ರತಂಡ ಮಾತ್ರ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಸಲಗ ಸುಂದರಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಇಂದು ಚಿತ್ರತಂಡ ಸಮಾಚಾರವನ್ನು ಅಧಿಕೃತಗೊಳಿಸಿದೆ.