ಹೇಮಾ ಕಮಿಟಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದೇ ಮಾದರಿಯ ಕಮಿಟಿಯನ್ನು ಕರ್ನಾಟಕ ಹಾಗೂ ತಮಿಳುನಾಡಿನಲ್ಲೂ ರಚಿಸಬೇಕೆಂದು ಆಗ್ರಹಿಸಿ ಫೈರ್ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಾಲಿಟಿ (FIRE) ಸದಸ್ಯರು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.
ಗುರುವಾರ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ತಾರೆಯರ ಬಳಗ ಮನವಿ ಪತ್ರ ಸಲ್ಲಿಸಿತು. ಫೈರ್ ನಿಯೋಗದ ಸದಸ್ಯರಾದ ನಟ ಚೇತನ್, ನಟಿ ಶೃತಿ ಹರಿಹರನ್, ನೀತು ಶೆಟ್ಟಿ ಅವರಿದ್ದ ನಿಯೋಗ ಕೇರಳದ ನ್ಯಾ.ಹೇಮಾ ಕಮಿಟಿ ಮಾದರಿಯಲ್ಲಿ ಕರ್ನಾಟದಲ್ಲೂ ಕಮಿಟಿ ರಚಿಸಬೇಕು. ಈ ಮೂಲಕ ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆಗಳನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಈ ಕುರಿತು 'ಎರಡನೇ ಸಲ' ಸಿನಿಮಾ ಮೂಲಕ ಗಮನ ಸೆಳೆದ ನಟಿ ಸಂಗೀತಾ ಭಟ್ ಕೂಡಾ ಧ್ವನಿ ಎತ್ತಿದ್ದಾರೆ. ಈ ಹಿಂದೆ 'ಮೀ ಟೂ' ಪ್ರಕರಣದಲ್ಲಿ ಸಂಗೀತ ಭಟ್ ಆರೋಪ ಮಾಡಿದ್ದರು. "ಮಲಯಾಳಂ ಚಿತ್ರರಂಗದಂತೆ ಕರ್ನಾಟಕದಲ್ಲಿ ಫೈರ್ ಕಮಿಟಿಯಿಂದ ಮುಂದಿನ ದಿನಗಳಲ್ಲಿ ಬರುವ ಹೊಸ ನಟಿ ಹಾಗು ನಟರಿಗೆ ಸಹಾಯವಾಗಲಿದೆ. ಕೇವಲ ಲೈಂಗಿಕ ದೌರ್ಜನ್ಯ ಮಾತ್ರವಲ್ಲದೆ ಚಿತ್ರರಂಗದಲ್ಲಿ ಕೆಲವು ನಟಿಯರಿಗೆ ಸಂಭಾವನೆ ವಿಚಾರದಲ್ಲಿ ಅನ್ಯಾಯವಾದಾಗ ಈ ಕಮಿಟಿಯಿಂದ ಉಪಯೋಗವಾಗುತ್ತದೆ" ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.