ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ಇತ್ತೀಚೆಗೆ ಸಲ್ಮಾನ್ ಖಾನ್ ಮುಖ್ಯಭೂಮಿಕೆಯ 'ಸಿಕಂದರ್' ಶೂಟಿಂಗ್ ಸಂದರ್ಭ ಗಾಯಗೊಂಡಿದ್ದರು. ಕಾಲಿಗೆ ಗಾಯವಾಗಿರುವುದಾಗಿ ಸ್ವತಃ ನಟಿಯೇ ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ತಿಳಿಸಿದ್ದರು. ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಶೀಘ್ರವೇ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ.
ಜಿಮ್ನಲ್ಲಿ ವರ್ಕ್ಔಟ್ ಮಾಡುವಾಗ ರಶ್ಮಿಕಾ ಮಂದಣ್ಣ ಕಾಲಿಗೆ ಪೆಟ್ಟಾಗಿತ್ತು. ನಟಿ ವಿಶ್ರಾಂತಿ ಪಡೆಯುತ್ತಿದ್ದರು. ಆದ್ರೀಗ ತಮ್ಮ ಮುಂಬರುವ ಛಾವಾ ಚಿತ್ರದ ಪ್ರಚಾರ ಹಿನ್ನೆಲೆ, ಹೈದರಾಬಾದ್ನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಗಾಯಗೊಂಡ ನಟಿ ಅಭಿಮಾನಿಗಳೆದುರು ಕಾಣಿಸಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಬೆಡಗಿ ನಡೆಯಲಾಗದ ಪರಿಸ್ಥಿತಿಯಲ್ಲಿದ್ದಾರೆ.
ಹೌದು, ರಶ್ಮಿಕಾ ಇಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಕೂಡಾ ವೀಲ್ ಚೇರ್ನಲ್ಲಿ. ಕಾರಿನಿಂದ ಇಳಿದು ಕುಂಟುತ್ತಲೇ ನಡೆದ ನಟಿ ವೀಲ್ ಚೇರ್ ಮೇಲೆ ಕುಳಿತಿದ್ದಾರೆ. ನಂತರ ಅವರನ್ನು ಕರೆದೊಯ್ಯಲಾಗಿದೆ. ಕ್ಯಾಶುವಲ್ ಔಟ್ಫಿಟ್ ಜೀನ್ಸ್, ಶರ್ಟ್ ಧರಿಸಿದ್ದ ನಟಿ ಕ್ಯಾಪ್, ಮಾಸ್ಕ್ನಿಂದ ತಮ್ಮನ್ನು ಕವರ್ ಮಾಡಿಕೊಂಡಿದ್ದರು. ವೀಲ್ ಚೇರ್ನಲ್ಲಿ ಕುಳಿತ ಅವರು ತಮ್ಮ ಮೊಬೈಲ್ನಲ್ಲಿ ಬ್ಯುಸಿಯಾಗಿದ್ದು, ನಟಿಯ ಮುಖ ಸ್ಪಷ್ಟವಾಗಿ ಗೋಚರಿಸಿಲ್ಲ.
ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಮಂದಣ್ಣ ತೆರೆಹಂಚಿಕೊಂಡಿರುವ ಬಹುನಿರೀಕ್ಷಿತ 'ಛಾವಾ' ಚಿತ್ರದ ಟ್ರೇಲರ್ ಇಂದು ಅನಾವರಣಗೊಳ್ಳಲಿದೆ. ಮುಂಬೈನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಿನ್ನೆಲೆ, ರಶ್ಮಿಕಾ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ತಮ್ಮ ಗಾಯದ ಹೊರತಾಗಿಯೂ ನಟಿ ಮುಂಬೈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದು ಅವರ ಕೆಲಸದ ಮೇಲಿನ ಬದ್ಧತೆಯನ್ನು ಒತ್ತಿ ಹೇಳುತ್ತಿದೆ.